

ವಿಜಯಪುರ: ಬರದ ನಾಡು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರದಲ್ಲಿ ಅರಣ್ಯೀಕರಣ ಸಂಕಲ್ಪ ಮಾಡಲಾಗಿದ್ದು, ಗ್ರಾಮ ಪಂಚಾಯಿತಿಗೊಂದು ಉದ್ಯಾನವನ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಅದಕ್ಕಾಗಿ ಪ್ರತಿ ತಾಲೂಕುಗಳಲ್ಲೂ ಸಸ್ಯಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ 211 ಗ್ರಾಮ ಪಂಚಾಯಿತಿಗಳನ್ನೂ ಹಸಿರು ಗ್ರಾಮಗಳನ್ನಾಗಿ ಪರಿವರ್ತಿಸಲು ಅರಣ್ಯ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಜ್ಜಾಗಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 1794.76 ಹೆಕ್ಟೇರ್ ನಷ್ಟು ಇದೆ. ಇದರಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಒಟ್ಟು 1053.29 ಹೆಕ್ಟೇರ್ ಇದೆ. ಈ ಸರ್ಕಾರಿ ಜಮೀನಿನಲ್ಲಿ ಒಟ್ಟು 754.52 ಹೆಕ್ಟೇರ್ ನಲ್ಲಿ 2.49 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಜಿಲ್ಲೆಗೆ 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 4.50ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈಗಾಗಲೇ 2.66 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 5 ವಲಯಗಳಾದ ವಿಜಯಪುರ ತಾಲೂಕಿನ ಹಡಗಲಿ, ಇಂಡಿ ತಾಲೂಕಿನ ಬಬಲಾದ, ಬಸವನ ಬಾಗೇವಾಡಿ ತಾಲೂಕಿನ ಮಣೂರ, ಸಿಂದಗಿ ತಾಲೂಕಿನ ಬಬಲೇಶ್ವರ ಹಾಗೂ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮಗಳಲ್ಲಿ ಸಸ್ಯ ಕ್ಷೇತ್ರಗಳಿದ್ದು, ಇದರಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 56,468 ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಯ ಇತರೆ ಯೋಜನೆಗಳಡಿ 55,360 ಸಸಿಗಳನ್ನು ಬೆಳೆಸಲಾಗಿದೆ. ಬೆಳೆಸಿರುವ ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಟ್ಟು 60,705 ಸಸಿಗಳನ್ನು ವಿತರಿಸಲಾಗಿದೆ. ಅಷ್ಟೇ ಅಲ್ಲದೇ ಇನ್ನೂ 1,00,748 ಸಸಿಗಳ ಅವಶ್ಯಕತೆ ಇದ್ದು, ಮುಂಬರುವ ದಿನಗಳಲ್ಲಿ ಅವಶ್ಯವಿರುವ ಸಸಿಗಳನ್ನು ಬೆಳೆಸಿ ನಾಟಿ ಮಾಡಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.
ಮುಂಗಾರು ಕೃಷಿ ಚಟುವಟಿಕೆ ಗರಿಗೆದರಿರುವಂತೆ ಜಿಲ್ಲೆಯಲ್ಲಿ ಮುಂಗಾರು ಅರಣ್ಯ ಚಟುವಟಿಕೆ ಶುರುವಾಗಿದೆ. ಸಸಿ ನೆಟ್ಟು ಪೋಷಿಸುವ ಕೆಲಸ ಎಲ್ಲೆಡೆ ಸಾಗಿದೆ. ಹೊಲ-ಗದ್ದೆಗಳಲ್ಲಿ ಕೃಷಿ ಬೆಳೆಗಳ ಬಿತ್ತನೆ, ನಾಟಿ ಕಾರ್ಯದಂತೆಯೇ ಅರಣ್ಯ ಪ್ರದೇಶ, ರಸ್ತೆ ಬದಿಗಳು, ಶಾಲೆ-ಅಂಗನವಾಡಿ ಆವರಣಗಳು, ಆಟದ ಮೈದಾನಗಳ ಸುತ್ತ-ಮುತ್ತ, ಸರಕಾರಿ ಕಛೇರಿಗಳು ಸೇರಿದಂತೆ ಅವಕಾಶ ಇದ್ದಲ್ಲೆಲ್ಲಾ ಸಸಿಗಳ ನಾಟಿ ಮಾಡುವ ಕಾರ್ಯ ಪ್ರಾರಂಭಗೊಂಡಿದೆ. ಒಟ್ಟು 1 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ಕರ್ನಾಟಕ ಸಾಮಾಜಿಕ ಅರಣ್ಯ, ಮಹಾತ್ಮ ಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಹಸಿರು ಕರ್ನಾಟಕ, ಹಸಿರು ಆಯ-ವ್ಯಯ, ನಗರ ಪ್ರದೇಶ ಹಸಿರೀಕರಣ, ರಸ್ತೆ ಬದಿ ನೆಡುತೋಪು ಸೇರಿದಂತೆ ಸಪ್ತಯೋಜನೆಯ ಅನುದಾನಗಳ ಆಸರೆಯಾಗಿದೆ. ಜಿಲ್ಲಾ ಪಂಚಾಯತಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಇಲಾಖೆಯಲ್ಲಿನ ವಿವಿಧ ಯೋಜನೆಗಳಡಿ ಪ್ರಸ್ತುತ ಸಾಲಿನಲ್ಲಿ ಹೊಸದಾಗಿ 2.49 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಹಾಗೂ ಈಗಾಗಲೇ ನಿರ್ಮಾಣ ಮಾಡಿದ ನೆಡುತೋಪುಗಳನ್ನು ನಿರ್ವಹಿಸಲಾಗುತ್ತಿದೆ ಎಂದಿದ್ದಾರೆ.
2023-24 ನೇ ಸಾಲಿಗೆ ಅರಣ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಶ್ರೀಗಂಧ, ಹೊಂಗೆ, ಬೇವು, ಸೀತಾಫಲ, ನೆಲ್ಲಿ, ಮಹಾಘನಿ, ಹೆಬ್ಬೇವು, ನಿಂಬೆ, ಕಾಡುಬಾದಾಮಿ, ಸಾಗವಾನಿ, ರಕ್ತಚಂದನ, ಸೇರಿದಂತೆ ಇತರೆ 22 ಬಗೆಯ 2.42 ಲಕ್ಷ ಸಸಿಗಳನ್ನು ಪೋಷಣೆ ಮಾಡಿ 2024-25ನೇ ಸಾಲಿಗೆ ರೈತರಿಗೆ ರಿಯಾಯಿತಿ ದರಗಳಲ್ಲಿ ಸುಮಾರು 2,42,000 ಸಸಿಗಳನ್ನು ವಿತರಿಸಲಾಗಿದೆ. ಮಣ್ಣಿನ ಸವಕಳಿ ತಡೆಯಲು, ಅಂರ್ತಜಲ ಮಟ್ಟ ಹೆಚ್ಚಿಸಲು ಅರಣ್ಯೀಕರಣ ಸಹಕಾರಿಯಾಗಿದ್ದು, ಈಗಾಗಲೇ ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.