

ವಿಜಯಪುರ: ತಾಲೂಕಿನ ಕನ್ನೂರು ಬಳಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿರುವ ಪೊಲೀಸರ ಮೇಲೆಯೇ ಹಲ್ಲೆಗೆತ್ನಿಸಿದ ಆರೋಪಿಯನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಒಟ್ಟು ಐವರನ್ನು ಬಂಧಿಸಲಾಗಿದ್ದು, ಅದರಲ್ಲಿ ಪೊಲೀಸರ ಮೇಲೆ ಬೈಕ್ ಹಾಯಿಸಿ ಹಲ್ಲೆ ನಡೆಸಿದ ಆರೋಪಿ ಅಕ್ಷಯ್ ಜುಲ್‌ಜುಲೆ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬೈಕ್ ಮೇಲೆ ತಪ್ಪಿಸಿಕೊಳ್ಳಲೆಯತ್ನಿಸಿದ ಅಕ್ಷಯ್‌ನನ್ನು ಹಿಡಿಯಲೆಂದು ಪೊಲೀಸರು ಬೆನ್ನಟ್ಟಿದ್ದಾರೆ. ಈ ವೇಳೆ ಇಬ್ಬರು ಪೇದೆಗಳ ಮೇಲೆ ಬೈಕ್ ಹಾಯಿಸಿ ಗಾಯಗೊಳಿಸಿದ್ದಾರೆ. ಕೂಡಲೇ ಇನ್ಸಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೊನೆಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಅಕ್ಷಯ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಈತನೊಂದಿಗೆ ಗಾಯಾಳು ಪೇದೆಗಳು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನ್ನೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಎಂಬುವರನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈಯ್ಯಲಾಗಿತ್ತು. ಹತ್ಯೆಗೀಡಾದ ಈ ಇಬ್ಬರು 2023ರಲ್ಲಿ ಈರಣ್ಣಗೌಡ ಪಾಟೀಲ ಎಂಬಾತನನ್ನು ಕೊಲೆ ಮಾಡಿದ್ದರು. ಮಲ್ಲನಗೌಡ ಹಾಗೂ ಈರಣಗೌಡ ಎಂಬುವರು ಬಾರ್‌ನಲ್ಲಿ ಸಾರಾಯಿ ಕುಡಿಯುತ್ತಿರಬೇಕಾದರೆ ಸಾಗರ ಬೆಳುಂಡಗಿ ಹಾಗೂ ಇಸಾಕ್ ಖರೇಷಿ ಟೈಲ್ಸ್‌ನಿಂದ ಹೊಡೆದಿದ್ದರು. ಎಂಟು ತಿಂಗಳ ಬಳಿಕ ಚಿಕಿತ್ಸೆ ಫಲಿಸದೇ ಈರಣ್ಣಗೌಡ ಸಾವಿಗೀಡಾಗಿದ್ದನು. ಆ ದ್ವೇಷದಿಂದಲೇ ಇದೀಗ ಭಾನುವಾರ ರಾತ್ರಿ 10.30ರಿಂದ 11 ಗಂಟೆ ಸುಮಾರಿಗೆ ಅಕ್ಷಯ್ ಜುಲ್‌ಜುಲೆ ಸೇರಿದಂತೆ ಐವರು ಬಂಧಿತ ಆರೋಪಿಗಳು ಸೇರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು.
ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಚುರುಕಿನ ಕಾರ್ಯಾಚರಣೆಗಿಳಿದಿದ್ದರು. ಮಂಗಳವಾರ ಬೆಳಗಿನ ಜಾವ ಪೊಲೀಸರು ಬಂಧಿಸಲು ಹೋದಾಗ ಅಕ್ಷಯ್ ಬೈಕ್ ಮೇಲೆ ವೇಗವಾಗಿ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈತನ ಮೇಲೆ ಮೊದಲೇ ಎರಡು ಪ್ರಕರಣಗಳು ಕೂಡ ದಾಖಲಾಗಿದ್ದವು. ಇನ್ನುಳಿದಂತೆ ನಾಲ್ವರನ್ನು ಸಹ ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿರುವ ಕಾರಣ ಅವರ ಹೆಸರು ಗೌಪ್ಯವಾಗಿರಿಸಲಾಗುತ್ತಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.