

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹಾಗೂ ಪಿಪಿಪಿ ಮಾದರಿ ಕೈಡಲು ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ 21ನೇ ದಿನವಾದ ಬುಧವಾರದಂದು ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಧರಣಿಗೆ ಅಖಿಲ ಭಾರತೀಯ ಝಾಮ್ ಝಾಮ್ ಅಸೋಸಿಯೇಷನ್, ಕೃಷ್ಣಾ ಕಣಿವೆ ಹೋರಾಟಗಾರರು, ಅಲೆಮಾರಿ ಸಂಘಟನೆ, ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ, ಸಮಗಾರ ಹರಳಯ್ಯ ಸಮಾಜ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದವು.
ಕೃಷ್ಣಾ ಕಣಿವೆ ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ, ಜಿಲ್ಲೆಯ ಪ್ರತಿಯೊಬ್ಬರ ಮನಸ್ಸಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬ ಆಶಯವಿದೆ. ಆದರೆ, ಕೆಲವು ರಾಜಕಾರಣಿಗಳು ಇದಕ್ಕೆ ಅವಕಾಶ ಕೊಡುವುದಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಅವರು ಬಿಡುವುದಿಲ್ಲ. ಹೀಗಾಗಿ ಹೋರಾಟದ ಮೂಲಕವೇ ಸರ್ಕಾರಿ ವೈದ್ಯಕೀಯ ಕಾಲೇಜ್ ಧಕ್ಕಿಸಿಕೊಳ್ಳುವ ಅನಿವಾರ್ಯತೆ ಸೃಷ್ಠಿಯಾಗಿದೆ. ಈ ಹೋರಾಟ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ರಾಜಕಾರಣಿಗಳಿಗೆ ಜಿಲ್ಲೆಯ ಬಡ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜಿಲ್ಲೆಯ ಪ್ರಭಾವಿ ಸಚಿವರು ಹಾಗೂ ಶಾಸಕರು ಸರ್ಕಾರಿ ಕಾಲೇಜ್ ಸ್ಥಾಪಿಸುವ ಖಚಿತ ಭರವಸೆಯೊಂದಿಗೆ ಧರಣಿ ಮುಕ್ತಾಯಗೊಳಿಸಬೇಕು. ಇಲ್ಲವಾದಲ್ಲಿ ಜನರಿಂದ ವ್ಯಾಪಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.
ಅಖಿಲ ಭಾರತೀಯ ಝಾಮ್ ಝಾಮ್ ಅಸೋಸಿಯೇಷನ್ ಸಂಘಟನೆಯ ರಾಜ್ಯ ಅಧ್ಯಕ್ಷ ಮೊಹ್ಮದ್ ಯುಸೂಫ್ ಜಮಾದಾರ ಮಾತನಾಡಿ, ನಮ್ಮ ಸಚಿವರು, ಶಾಸಕರು ಜನ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಜಿಲ್ಲೆಯ ಜನತೆ ಬಗ್ಗೆ ಇವರಿಗೆ ಕಿಂಚಿತ್ತೂ ಕಳಕಳಿ ಇಲ್ಲ ಎಂಬುದಕ್ಕೆ ಈ ಧೋರಣೆಯೇ ಸಾಕ್ಷಿ. 21 ದಿನಗಳಿಂದ ಧರಣಿ ನಡೆಯುತ್ತಿದ್ದರು ಸ್ಪಷ್ಟವಾಗಿ ಲಿಖಿತ ಭರವಸೆ ನೀಡಿ ಧರಣಿ ಸ್ಥಗಿತಗೊಳಿಸುವ ಇಚ್ಛಾಶಕ್ತಿಯೇ ಇಲ್ಲದರಿವುದು ಖೇದಕರ ಎಂದರು.
ಹುಬ್ಬಳ್ಳಿ- ಧಾರವಾಡ ಪೂರ್ವ ವಿಭಾಗದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿಯಾಗಿ ಎಷ್ಟು ವೈದ್ಯಕೀಯ ಕಾಲೇಜುಗಳಾದರೂ ಇರಲಿ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಹಳ ಅವಶ್ಯಕತೆ ಇದೆ. ಇಂದು ನಮ್ಮ ಅಲೆಮಾರಿ ಜನಾಂಗ ಸಂಪೂರ್ಣ ಬೆಂಬಲ ನೀಡಲು ಇಲ್ಲಿ ಬಂದಿದ್ದೇವೆ. ಸರ್ಕಾರ ಆದಷ್ಟು ಬೇಗನೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದಿದ್ದರೆ ಮುಂಬರವ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯಪುರ ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಾದ ಕೆ.ಎನ್. ಮೇಟಿ, ಡಾ.ಬಾಬು ಸಜ್ಜನ, ಮಹಾದೇವ ದೇವರ, ಶ್ರೀದೇವಿ ರಜಪೂತ, ಬಿ.ಎಸ್. ನವಲಿ, ಮಂಜುಳಾ ಅಂಗಡಿ, ದಸ್ತಗೀರ ಸಾಲೋಟಗಿ, ರವಿ ಕಿತ್ತೂರು, ಆರ್.ಡಿ. ಶಿವನಗುತ್ತಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಾಂಚ್ಯಾಣಿ, ಎಂ.ಜಿ. ಯಾದವಾಡ, ಎಸ್.ವೈ. ಗದಗ, ಸೋಮನಗೌಡ ಎಸ್. ಪಾಟೀಲ, ಬಿ.ಎಸ್. ಸಾರವಾಡ, ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಅಶೋಕ ಸೌದಾಗರ, ಮುಖಂಡರಾದ ಮುತ್ತಣ್ಣ ಕಬಾಡೆ, ಸಾಯಬಣ್ಣ ನಿರಂಜನ, ಎಸ್.ಸಿ. ಸಾತಪುತೆ, ಸಿದ್ರಾಮ ಹೊನ್ನಮೋರೆ, ಯಲ್ಲಪ್ಪ ಸಂಕ್ಯನ್ನವರ, ಪರಮಾನಂದ ಹಳ್ಳೂರ, ಎಂ.ಆರ್. ಸೌದಾಗರ ಮತ್ತಿತರರಿದ್ದರು.