ನಿಮ್ಮ ಮಕ್ಕಳಿಗೂ ಇಂಥದ್ದೇ ಊಟ ಕೊಡ್ತಿರಾ?

ಕೋಲಾರ ತಾಲೂಕಿನ ಅಮ್ಮನಲ್ಲೂರು ಹಾಸ್ಟೆಲ್​ಗೆ ಶಾಸಕ ಕೊತ್ತೂರು ಮಂಜುನಾಥ್​ ಹಾಗೂ ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸ್​, ಚನ್ನಬಸಪ್ಪ ಇದ್ದರು.
10kolar5- mla visit
ಕೋಲಾರ ತಾಲೂಕಿನ ಅಮ್ಮನಲ್ಲೂರು ಹಾಸ್ಟೆಲ್​ಗೆ ಶಾಸಕ ಕೊತ್ತೂರು ಮಂಜುನಾಥ್​ ಹಾಗೂ ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸ್​, ಚನ್ನಬಸಪ್ಪ ಇದ್ದರು.
Published on

ಅಮ್ಮನಲ್ಲೂರು ವಸತಿ ನಿಲಯಕ್ಕೆ ಶಾಸಕ, ಎಂಎಲ್ಸಿ ಭೇಟಿ > ಹಾಸ್ಟೆಲ್​ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ



ವಿಜಯವಾಣಿ ಸುದ್ದಿಜಾಲ ಕೋಲಾರ/ಕ್ಯಾಲನೂರು
ನಿಮ್ಮಮನೆಗಳಲ್ಲಿ ಮಕ್ಕಳಿಗೆ ಇಂತಹ ಪದಾರ್ಥಗಳಲ್ಲಿನ ಊಟ ನೀಡುತ್ತೀರಾ ? ನಿಮಗೆ ಫ್ಯಾನ್​, ಕೂಲರ್​ ಎಲ್ಲವೂ ಸರಿಯಾಗಿ ಇರಬೇಕು. ಆದರೆ ಮಕ್ಕಳಿಗೆ ಬೇಡವಾ ? ಇದು ಶಾಸಕ ಕೊತ್ತೂರು ಮಂಜುನಾಥ್​ ಅಮ್ಮನಲ್ಲೂರು ವಸತಿನಿಲಯದ ವಾರ್ಡನ್​ನ್ನು ತರಾಟೆಗೆ ತೆಗೆದುಕೊಂಡ ಪರಿ.
ತಾಲೂಕಿನ ಅಮ್ಮನಲ್ಲೂರು ಮೆಟ್ರಿಕ್​ ಪೂರ್ವ ಹಾಸ್ಟೆಲ್​ನಲ್ಲಿ ಶುಕ್ರವಾರ ದೋಸೆ ಸೇವಿಸಿ 18 ಮಕ್ಕಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ಶನಿವಾರ ವಸತಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಸ್ವಸ್ಥಗೊಂಡಿದ್ದ 18 ಮಕ್ಕಳ ಪೈಕಿ ಹಲವರು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದು, ಐವರು ಮಾತ್ರ ಚಿಂತಾಮಣಿಯ ಆಸ್ಪತ್ರೆಯಲ್ಲಿ ಶನಿವಾರವೂ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಚಿಂತಾಮಣಿ ಆಸ್ಪತ್ರೆಗೂ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದರು. ಬಳಿಕ ಹಾಸ್ಟೆಲ್​ಗೆ ಭೇಟಿ ನೀಡಿದ್ದರು.
ಈ ವೇಳೆ ಮಕ್ಕಳು, ಅಡುಗೆಯವರ ವಿರುದ್ಧ ಹಾಗೂ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಶಾಸಕರು, ತಪ್ಪಿಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲ್​ ಆವರಣಕ್ಕೆ ಬರುತ್ತಿದ್ದಂತೆಯೇ ಸ್ವಚ್ಛತೆ ಗಮನಿಸಿದ ಕೊತ್ತೂರು ಮಂಜುನಾಥ್​, ಇಷ್ಟು ಸ್ವಚ್ಛವಾಗಿ ಇಟ್ಟುಕೊಂಡಿದ್ದೀರಿ, ಇದು ಇವತ್ತು ಮಾಡಿರುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು. ಹಾಸ್ಟೆಲ್​ನ ಅಡುಗೆಕೋಣೆಗೆ ತೆರಳಿ ನೀರು ಸೇವಿಸಿದರು. ಅದೂ ಸರಿಯಾಗಿ ಫಿಲ್ಟರ್​ ಆಗಿರಲಿಲ್ಲ. ಬಳಿಕ ದಾಸ್ತಾನು ಕೊಠಡಿಗೆ ತೆರಳಿದಾಗ ವಿವಿಧ ಆಹಾರ ಪದಾರ್ಥಗಳಲ್ಲಿ ಹುಳ ಇದ್ದುದು ಕಂಡುಬಂತು. ಇದನ್ನು ಕಂಡು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್​ನಲ್ಲಿ ಇರುವುದು ಬಡವರ ಮಕ್ಕಳು. ನಿಮ್ಮ ಮನೆಗಳಲ್ಲಿ ಮಕ್ಕಳಿಗೆ ಇಂತಹ ಪದಾರ್ಥಗಳಲ್ಲಿನ ಊಟ ನೀಡುತ್ತೀರಾ ಎಂದು ಕಿಡಿಕಾರಿದರು. ಬಳಿಕ ವಾರ್ಡನ್​ ಕಚೇರಿಗೆ ತೆರಳಿದಾಗ ಅಲ್ಲಿನ ಸ್ವಚ್ಛತೆ ಕಂಡು ನಿಮಗೆ ಫ್ಯಾನ್​, ಕೂಲರ್​ ಎಲ್ಲವೂ ಸರಿಯಾಗಿ ಇರಬೇಕು. ಆದರೆ ಮಕ್ಕಳಿಗೆ ಬೇಡವಾ? ಎಂದು ಪ್ರಶ್ನಿಸಿದರು.
ಸ್ಥಳದಲ್ಲಿದ್ದ ವಾರ್ಡನ್​, ನಾನು ರಜೆಯ ಮೇಲೆ ಊರಿಗೆ ಹೋಗಿದ್ದೆ ಸರ್​, ಅಡುಗೆ ಸಹಾಯಕರಿಗೆ ಜವಾಬ್ದಾರಿ ನೀಡಿದ್ದೆ ಎಂದು ಉತ್ತರಿಸಿದರು. ಆಗ ಗ್ರಾಮಸ್ಥರು ವಾರ್ಡನ್​ ವರ್ತನೆ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಮಕ್ಕಳಿಗೆ ಅನ್ಯಾಯ ಮಾಡಿದರೆ ಮಾರಣಾಂತಿಕ ಕಾಯಿಲೆ
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್​, ಮಕ್ಕಳಿಗೆ ಅನ್ಯಾಯ ಮಾಡುವವರು ಯಾರೇ ಆಗಿದ್ದರೂ ಕುಷ್ಠರೋಗ, ಹೃದಯಾಘಾತ, ಬಿಪಿ, ಶುಗರ್​, ಕ್ಯಾನ್ಸರ್​, ಟಿಬಿ ಸೇರಿ ಎಲ್ಲ ರೋಗಗಳೂ ಬರುತ್ತವೆ ಎಂದು ಶಾಪ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ಅಡುಗೆ ಸಹಾಯಕನ ಅಮಾನತಿಗೆ ಸೂಚಿಸಿದ್ದು, ಬೇರೆ ಕಡೆಗೆ ವರ್ಗಾಯಿಸುತ್ತೇವೆ. ಅಲ್ಲದೆ ಹಾಸ್ಟೆಲ್​ನಲ್ಲಿ ಕೆಲ ಆಹಾರ ಪದಾರ್ಥಗಳಲ್ಲಿ ಹುಳ ಕಂಡುಬಂದಿದ್ದು, ಆಹಾರ ಸರಬರಾಜುದಾರರನ್ನು ಕೂಡಲೇ ಬದಲಾಯಿಸುತ್ತೇವೆ. ಇಲಾಖೆಯ ತಾಲೂಕು -ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸಚಿವರ ಗಮನಕ್ಕೆ ದಾಖಲೆ ಸಮೇತ ದೂರು ನೀಡುವುದಾಗಿ ಹೇಳಿದರು.

ಜಾಗರೂಕತೆಯಿಂದ ನೋಡಿಕೊಳ್ಳಿ
ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ಸರ್ಕಾರವು ಬಡ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್​ಗಳಿಗೆ ಅನುದಾನ, ಸೌಲಭ್ಯ ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಶ್ರಮಿಸಬೇಕಾದ ನೀವು ನಿರಂತರ ನಿಗಾ ಏಕೆ ವಹಿಸಲಿಲ್ಲ? ನಿರಂತರವಾಗಿ ಹಾಸ್ಟೆಲ್​, ಶಾಲೆಗಳಿಗೆ ಭೇಟಿ ನೀಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಡವರು, ದಲಿತರ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವುದಕ್ಕೆ ಆಗದಿದ್ದರೆ ನಿಮಗೆ ಅಧಿಕಾರಿಯಾಗಿರುವ ಅರ್ಹತೆ ಇರುವುದಿಲ್ಲ ಎಂದು ಕಿಡಿಕಾರಿದರು.ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್​, ಮುಖಂಡರಾದ ಮುರಳಿ, ಉರಟ ಅಗ್ರಹಾರ ಚೌಡರೆಡ್ಡಿ, ಜಾಗೃತಿ ಸಮಿತಿ ಸದಸ್ಯರಾದ ಸಿ.ಕೆ.ರವೀಂದ್ರನಾಥ್​, ನಾಗೇಶ್​ ಇದ್ದರು.

ಅಮಾನತಿಗೆ ಸೂಚನೆ
ಘಟನೆಯ ವಿಚಾರವಾಗಿ ಇಲ್ಲಿನ ವಾರ್ಡನ್​ ಹಾಗೂ ಅಡುಗೆ ಸಹಾಯಕನನ್ನು ಅಮಾನತುಗೊಳಿಸಿ, ಬೇರೆ ಕಡೆಗೆ ವರ್ಗಾವಣೆ ಮಾಡಲು ನೀವು ಕ್ರಮಕೈಗೊಳ್ಳಿ. ನಿಮ್ಮ ವಿರುದ್ಧ ಕ್ರಮಕೈಗೊಳ್ಳಲು ಸಚಿವರು, ಸಿಎಂ ಬಳಿ ನಾನು ಚರ್ಚೆ ನಡೆಸುವುದಾಗಿ ಅಲ್ಲಿಯೇ ಇದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್​ ಹಾಗೂ ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net