ತಂದೆ-ತಾಯಿಗೆ ಗೌರವ ತರುವ ಕೆಲಸ ಮಾಡಿ

12 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಂದೆ-ತಾಯಿಗಳಿಗೆ ಗೌರವ ತರುವ ರೀತಿ ನಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ವಿಭಾಗ, ಸ್ನಾತಕೋತ್ತರ ಕ್ರೀಡಾಕೂಟ ವಿಭಾಗ, ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರ, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗಗಳ ವತಿಯಿಂದ ಕವಿವಿಯಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಸುರಕ್ಷತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ಮಾತನಾಡಿ, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕಾನೂನಿನ ಎಲ್ಲ ಸೌಲಭ್ಯ ಪಡೆದು ಜಾಗೃತಿ ಹೊಂದುವುದರ ಜತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಜಾಗರೂಕತೆಯಿಂದ ಇರಬೇಕು. ಮಹಿಳೆಯರು, ವಿದ್ಯಾರ್ಥಿಗಳು ಉಚಿತ ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗ ಪಡೆಯಬೇಕು ಎಂದರು.
ಉಪ ಪೊಲೀಸ್ ಆಯುಕ್ತ ರವೀಶ್ ಸಿ.ಆರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಂತರ್ಜಾಲವನ್ನು ಶಿಕ್ಷಣಕ್ಕಾಗಿ ಸರಿಯಾದ ರೀತಿ ಉಪಯೋಗ ಮಾಡಬೇಕು. ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು, ಪುಸ್ತಕಗಳನ್ನು ಓದಿ ಜ್ಞಾನ ವಿಸ್ತರಿಸಿಕೊಂಡರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ. ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಸರಿಯಾಗಿ ರೂಪಿಸಿಕೊಂಡರೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆದು ಸಾಧಕರಾಗಬಹುದು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವ ಚನ್ನಪ್ಪ ಎ. ಮಾತನಾಡಿ, ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ, ಇಲಾಖೆ ಅಧಿಕಾರಿಗಳು, ಕವಿವಿ ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net