

ಚಿಕ್ಕಬಳ್ಳಾಪುರ: ರೈತ, ಕಾರ್ಮಿಕರು, ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರಗಳ ಜತೆಗೆ ನ್ಯಾಯಾಂಗವು ಸಹ ವಿಫಲವಾಗಿದೆ ಎಂದು ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿನ ಕೆಇಬಿ ಸಮುದಾಯ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಕೈಗೊಂಡಿದ್ದ ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಚೈನಾದಲ್ಲಿ ಭ್ರಷ್ಟಾಚಾರ ದೃಢಪಡುತ್ತಿದ್ದಂತೆ ತಪ್ಪಿತಸ್ಥರಿಗೆ ೬ ತಿಂಗಳೊಳಗೆ ಶಿಕ್ಷೆ ನೀಡಲಾಗುತ್ತದೆ. ಆದರೆ, ಇಲ್ಲಿ ೧೦ ವರ್ಷಗಳಾದರೂ ವಿಚಾರಣೆ ಮುಗಿಯುವುದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮಂತ್ರಿ ಸೇರಿದಂತೆ ಪ್ರಭಾವಿಗಳ ವಿರುದ್ಧದ ಬಹಳಷ್ಟು ಪ್ರಕರಣಗಳು ಬೇಗ ಕೈಗೆತ್ತಿಕೊಳ್ಳುತ್ತಿಲ್ಲ. ನೀರಾವರಿ ವಿಚಾರವಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಗೊಳಿಸುವ ಜವಾಬ್ದಾರಿಯನ್ನು ಏಕೆ ನಿರ್ವಹಿಸಲಿಲ್ಲ?. ಶಾಸಕಾಂಗ, ಕಾರ್ಯಾಂಗದ ಜತೆಗೆ ನ್ಯಾಯಾಂಗಕ್ಕೂ ನಾಚಿಕೆಯಾಗಬೇಕು. ಇದನ್ನು ಜನ ಸಾಮಾನ್ಯರು ಧೈರ್ಯವಾಗಿ ಪ್ರಶ್ನಿಸಬಹುದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳಿಗಿಂತಲೂ ಜನರೇ ಸಾರ್ವಭೌಮರು ಎಂದು ತಿಳಿಸಿದರು.
ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಹೋರಾಟಗಾರರಾದ ಸುಲೋಚನ ವೆಂಕಟರೆಡ್ಡಿ, ಹೊಳಲಿ ಪ್ರಕಾಶ್, ಎಸ್.ಲಕ್ಷ್ಮಯ್ಯ, ಸಲ್ಲಾವುದ್ದೀನ್, ಎಂ.ಆರ್.ಲಕ್ಷ್ಮೀನಾರಾಯಣ್, ಅಬ್ಬಣಿ ಶಿವಪ್ಪ, ಪುರದಗಡ್ಡೆ ಕೃಷ್ಣಪ್ಪ, ಲೋಕೇಶ್, ಕೆಂಪಣ್ಣ, ನೂರುಲ್ಲಾ, ಸುಷ್ಮಾ ಶ್ರೀನಿವಾಸ್ ಮತ್ತಿತರರು ಇದ್ದರು.
*ಗುಲಾಮಗಿರಿ, ದಲ್ಲಾಳಿಯ ಸರ್ಕಾರಗಳು
ಕಾರ್ಪೋರೇಟ್ ಕಂಪನಿ, ಉದ್ಯಮಿಗಳ ಪರವಾಗಿ ದಲ್ಲಾಳಿಗಳು, ಗುಲಾಮಗಿರಿ ಆಡಳಿತ ನಡೆಸುವ ಸರ್ಕಾರಗಳು ಇರಬೇಕೇ? ಎಂದು ಗೋಪಾಲಗೌಡ ಪ್ರಶ್ನಿಸಿದರು.
ರೈತರ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಂಡು ವಿದೇಶಿ ಇಲ್ಲವೇ ಕಾರ್ಪೋರೇಟ್ ಕಂಪನಿಗಳಿಗೆ ಕೊಡಲಾಗುತ್ತಿದೆ. ರೈತರು, ಮಹಿಳೆಯರು, ಕಾರ್ಮಿಕರ ಹಿತವನ್ನು ಕಡೆಗಣಿಸಲಾಗುತ್ತಿದೆ. ೭೦ ವರ್ಷವಾದರೂ ನೀರಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇರುವುದು ದುರದೃಷ್ಟಕರ. ಪ್ರತಿಯೊಬ್ಬರಿಗೂ ನೀರನ್ನು ಒದಗಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬೇಸರಿಸಿದರು.