

ಮಸ್ಕಿ: ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡಬೇಕು. ವಿನಾಕಾರಣ ಅಲೆದಾಡಿಸಬಾರದು ಎಂದು ಪುರಸಭೆ ಸಿಬ್ಬಂದಿಗೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ತಾಕೀತು ಮಾಡಿದರು.
ಶುಕ್ರವಾರ ಬೆಳಗ್ಗೆ ಪುರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಖಾತಾ ನಕಲು, ಕಟ್ಟಡ ಪರವಾನಗಿಯನ್ನು ನಿಗದಿತ ಅವಧಿಯಲ್ಲಿ ಜನರಿಗೆ ನೀಡುತ್ತಿಲ್ಲ ಎಂಬ ದೂರುಗಳಿವೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇಲ್ಲವಾದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡಬೇಕು. ಪುರಸಭೆ ಆದಾಯ ಸಂಗ್ರಹಿಸಲು ನಳ, ಆಸ್ತಿ ಕರ ವಸೂಲಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಮುಖ್ಯಾಧಿಕಾರಿ ನರಸರೆಡ್ಡಿ, ಕಂದಾಯ ನಿರೀಕ್ಷಕ ಬಸವರಾಜ, ಕಂದಾಯ ಅಧಿಕಾರಿ ಜಗದೀಶ, ಇಂಜಿನಿಯರ್ ಮಲ್ಲಿಕಾರ್ಜುನ, ನಾಗರಾಜ, ರವಿ ಸಿಂಗ್, ಶಿವು ಕಟ್ಟಿಮನಿ, ರವಿ ಸಜ್ಜನ್, ಕುಮಾರ್ ಇತರರಿದ್ದರು.
ಪಟ್ಟಣದ 17ನೇ ವಾರ್ಡ್‌ಗೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರಕುಂದು ಕೊರತೆ ಆಲಿಸಿದರು. ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಬೇಕು. ಚರಂಡಿಗಳು ತುಂಬಿದ್ದು, ಸ್ವಚ್ಛತೆ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು. ತಕ್ಷಣ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಾಧಿಕಾರಿ ನರಸರೆಡ್ಡಿಗೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಸೂಚಿಸಿದರು.ಪುರಸಭೆ ಸದಸ್ಯರಾದ ಮಲ್ಲಯ್ಯ ಪೂಜಾರಿ, ರಮೇಶ ಗುಡಿಸಲಿ, ನಾಮನಿರ್ದೆಶನ ಸದಸ್ಯ ಕೃಷ್ಣ ಚಿಗರಿ ಇದ್ದರು.