

ಶಿರಸಿ: ಕಳೆದ ವರ್ಷ ಬೆಳೆ ಸರ್ವೇ ಮಾಹಿತಿಯಲ್ಲಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅಡಕೆ ಕ್ಷೇತ್ರ ಕಡಿಮೆ ದಾಖಲಾಗಿತ್ತು. ಈ ವರ್ಷ ಬೆಳೆ ಸರ್ವೇ ಮಾಡುವಾಗ ಆ ದೋಷ ಮತ್ತೆ ಆಗದಂತೆ ನೋಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಬಿ.ಪಿ. ಸತೀಶ ಹೇಳಿದರು.
ನಗರದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ಕರೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷದ ಬೆಳೆ ಸರ್ವೇಯಲ್ಲಿ ಕೆಲವೆಡೆ ಅಂದಾಜು ಪ್ರಕಾರ ಬೆಳೆ ದಾಖಲಿಸಲಾಗಿತ್ತು. ಇದರಿಂದಾಗಿ ವಾಸ್ತವ ಅಡಕೆ ಕ್ಷೇತ್ರಕ್ಕೂ, ಬೆಳೆ ಸರ್ವೇಯಲ್ಲಿ ದಾಖಲಿಸಿದ ಕ್ಷೇತ್ರಕ್ಕೂ ವ್ಯತ್ಯಾಸ ಕಂಡುಬಂದಿದೆ. ಇದರಿಂದ ರೈತರಿಗೆ ಬೆಳೆ ಸಾಲ, ಬೆಳೆ ವಿಮೆ ಪಡೆಯಲೂ ಸಮಸ್ಯೆ ಆಗುತ್ತದೆ. ಈ ಬಾರಿ ಕಳೆದ ಅವಧಿಯ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಸಭೆಗೆ ಮಾಹಿತಿ ನೀಡಿ, 17 ಶಿಕ್ಷಕರು ಬೇರೆ ತಾಲೂಕಿಗೆ ವರ್ಗಾವಣೆ ಹೊಂದಿದ್ದಾರೆ. 13 ಶಿಕ್ಷಕರು ನಮ್ಮ ತಾಲೂಕಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ತಾಲೂಕಿನಲ್ಲಿ 156 ಶಿಕ್ಷಕರ ಹುದ್ದೆ ಖಾಲಿಯಿದೆ. ಪ್ರಾಥಮಿಕ ಶಾಲೆಗೆ 66 ಹಾಗೂ ಪ್ರೌಢಶಾಲೆಯಲ್ಲಿ 13 ಅತಿಥಿ ಶಿಕ್ಷಕರು ಇದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡಿದ್ದೇವೆ. ಶಾಲೆಗಳ ಕೊಠಡಿ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿ, ಕಳೆದ 15 ದಿನಗಳಿಂದ ಡೆಂಘೆ ಪ್ರಕರಣಗಳು ಶೂನ್ಯವಾಗಿದೆ. ಮಕ್ಕಳಿಗೆ ಲಸಿಕಾ ಕಾರ್ಯಕ್ರಮಗಳ ಸಾಧನೆ ಗಣನೀಯವಾಗಿದೆ. ಕುಷ್ಟರೋಗ ಪ್ರಕರಣಗಳು ಕಂಡುಬಂದಿಲ್ಲ. ಕ್ಷಯ ರೋಗ ನಿಯಂತ್ರಣದಲ್ಲಿ ಶೇ.36 ರಷ್ಟು ಸಾಧನೆ ಮಾಡಿದ್ದೇವೆ. ಅಂಧತ್ವ ನಿವಾರಣೆಯಲ್ಲಿಯೂ ಸಾಧನೆ ಮಾಡಿದ್ದೇವೆ. ಹಾವು ಕಡಿತ 21 ಪ್ರಕರಣಗಳು ದಾಖಲಾಗಿದ್ದು, ಹಾವು ಕಡಿತ ಹಾಗೂ ನಾಯಿ ಕಡಿತದ ಔಷಧ ದಾಸ್ತಾನಿದೆ. ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ, ಉಳಿದ ಎಲ್ಲ ಕಡೆಗಳಲ್ಲಿ ವೈದ್ಯರಿದ್ದಾರೆ. ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತರಬೇತಿ ನಿಮಿತ್ತ ಹುಬ್ಬಳ್ಳಿಗೆ ತೆರಳುವುದರಿಂದ 3 ದಿನ ವೈದ್ಯರು ಅಲಭ್ಯರಿರುತ್ತಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಪ್ರಯುಕ್ತ ಮಾನವನ ಸರಪಳಿ ನಿರ್ಮಿಸುವಂತೆ ಆದೇಶವಾಗಿದೆ. ಭೈರುಂಬೆ ಗ್ರಾಪಂನಿಂದ ಪ್ರಾರಂಭ ಮಾಡಲಾಗುತ್ತದೆ. ಜಾಥಾ ವಾಹನವನ್ನು ಸ್ವಾಗತ ಮಾಡಿ, ಬಿಡ್ಕಿಬೈಲ್ ನಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. 25 ಅರಣ್ಯ ಗಿಡ ನಾಟಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ನಗರದ ಐದು ವಸತಿ ಗೃಹದಲ್ಲಿ 375 ಮಂಜೂರಾತಿ ಸೀಟ್‌ಗಳಲ್ಲಿ 600 ವಿದ್ಯಾರ್ಥಿಗಳಿದ್ದಾರೆ. ಬಾಲಕಿಯರ ವಸತಿ ಗೃಹದಲ್ಲಿ 140 ವಿದ್ಯಾರ್ಥಿಗಳಿಗೆ ಕಾಟ್, ಬೆಡ್ ಕೊರತೆಯಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಿಡಿಪಿಒ ವೀಣಾ ಸಿರ್ಸಿಕರ ಮಾತನಾಡಿ, ತಾಲೂಕಿನಲ್ಲಿ 378 ಅಂಗನವಾಡಿ ಕಾರ್ಯ ನಿರ್ವಹಿಸುತ್ತಿವೆ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿದೆ. ಮಳೆಗಾಲದಲ್ಲಿ 51 ಅಂಗನವಾಡಿಗೆ ಹಾನಿಯಾಗಿದೆ. ಈ ಕುರಿತು ವರದಿ ಸಲ್ಲಿಸಲಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಇಒ ಸತೀಶ ಹೆಗಡೆ ಮಾತನಾಡಿ, ತಾಲೂಕಿನಲ್ಲಿ 5078 ಹೆಕ್ಟೇರ್ ಕ್ಷೇತ್ರಕ್ಕೆ ಅಡಕೆ ಕೊಳೆ ರೋಗ ಬಾಧಿಸಿದೆ. ತೋಟಗಾರಿಕಾ ಇಲಾಖೆಯಲ್ಲಿ ಹನಿ ನೀರಾವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಮುಖ್ಯವಾಗಿ ಸೋಲಾರ್ ಪಂಪ್‌ಸೆಟ್ ಗೆ ಶೇ.50 ರಷ್ಟು ಸಹಾಯಧನ ಸಿಗುತ್ತದೆ. ಅರ್ಜಿ ಸಲ್ಲಿಸಿದರೆ ಶೀಘ್ರ ಸಹಾಯಧನ ಲಭ್ಯವಿದೆ. ಸಮಗ್ರ ಕಾಳುಮೆಣಸು ವಿಸ್ತರಣೆಗೆ ಸಾಲ್ಕಣಿ ಗ್ರಾಮ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.