

ಮೈಸೂರು: ಅನ್ಯರಿಗೆ ದುಃಖವಾದರೂ ಪರವಾಗಿಲ್ಲ, ನಮ್ಮ ಸುಖ-ಸಂತೋಷ ಮುಖ್ಯ ಎಂಬ ಮನಸ್ಥಿತಿಯಿಂದ ಹೊರಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರಿನಲ್ಲಿ 36ನೇ ಚಾತುರ್ಮಾಸ್ಯ ವ್ರತದ ಕೊನೆಯ ದಿನವಾದ ಶುಕ್ರವಾರ ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರೋಟರಿ ಇನ್ನರ್ ವ್ಹೀಲ್‌ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕೈದಿಗಳ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಸಂಘ ಜೀವಿ. ನಾವು ಒಬ್ಬರೇ ಜೀವಿಸಲು ಕಷ್ಟ. ಹೀಗಿರುವಾಗ ಎಲ್ಲರೂ ಸುಖ ಸಂತೋಷಕ್ಕಾಗಿ ಹಂಬಲಿಸುತ್ತೇವೆ. ಆದರೆ, ಕೆಲವು ಬಾರಿ ನಮ್ಮ ಸುಖ, ಸಂತೋಷಕ್ಕಾಗಿ ಅನ್ಯರಿಗೆ ಕಷ್ಟ, ದುಃಖ ಕೊಡುತ್ತೇವೆ. ಇದಕ್ಕಾಗಿ ಕೆಟ್ಟ ಕೆಲಸಗಳಿಗೂ ಮುಂದಾಗುತ್ತೇವೆ. ಅದರಿಂದ ಸಮಾಜದಲ್ಲಿ ಅಶಾಂತಿ, ಅಪರಾಧ, ಕಷ್ಟ-ನಷ್ಟಗಳು ಉಂಟಾಗುತ್ತವೆ ಎಂದರು.
ನಮ್ಮ ಸಂತೋಷ ಅನ್ಯರ ಸಂತೋಷಕ್ಕೂ ಕಾರಣವಾಗುವ ಸತ್ಕಾರ್ಯವನ್ನು ಮಾಡಲು ಯತ್ನಿಸಬೇಕು. ಸಂತೋಷ ಹಂಚಬೇಕು. ಒಂದು ವೇಳೆ ಇನ್ನೊಬ್ಬರಿಗೆ ನಮ್ಮಿಂದ ಒಳಿತಾಗದಿದ್ದರೂ ಕೆಡುಕಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಇಹದಲ್ಲೂ ಪರದಲ್ಲೂ ನಮಗೆಲ್ಲ ಶ್ರೇಯಸ್ಸಿದೆ. ಅದನ್ನೇ ಧರ್ಮ ಎನ್ನುವುದು. ಅಂತಹ ಸನಾತನ ಧರ್ಮವೇ ಶಾಶ್ವತ. ಅದನ್ನು ಎಲ್ಲರೂ ಅನುಸರಿಸಿದರೆ ಒಳಿತು ಎಂದರು.
ಬೇಟೆ, ದರೋಡೆ ಮೊದಲಾದ ಕೃತ್ಯದಲ್ಲೇ ಬದುಕುತ್ತಿದ್ದ ವಾಲ್ಮೀಕಿ ಒಂದು ತಿರುವಿನಿಂದ ತಿಳಿವಳಿಕೆ ಪಡೆದು ರಾಮಮಂತ್ರ ಜಪಿಸುತ್ತಾ ರಾಮಾಯಣವನ್ನೇ ರಚಿಸಿದರು. ಲೋಕವೇ ಪೂಜಿಸುವ ಮಹರ್ಷಿಯಾದರು. ಇದು ನಮಗೆ ಮಾದರಿಯಾಗಬೇಕು. ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು
ತಿಳಿದೋ ತಿಳಿಯದೆಯೋ ಅಪರಾಧಗಳು ಆಗುತ್ತವೆ. ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟರೆ ಪರಿಶುದ್ಧರಾಗಲು ಸಾಧ್ಯವಿದೆ. ಮುಂದೆ ಇಂತಹ ತಪ್ಪು ನಡೆಸದೆ ಉತ್ತಮ ನಾಗರಿಕರಾಗಿ ಬದುಕುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದರು.
ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ.ಎಸ್.ರಮೇಶ್, ರೋಟರಿ ಸಂಸ್ಥೆ ಪದಾಧಕಾರಿಗಳು ಇದ್ದರು.