

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದು ವಕೀಲ ಎಂ.ಆರ್.ಗಿರೀಶ್ ಮುದ್ದನಹಳ್ಳಿ ಸಲಹೆ ನೀಡಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಬುಧವಾರ ‘ರಾಷ್ಟ್ರೀಯ ಯುವ ದಿನ’ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ‘ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಮಾತನಾಡಿದರು.
ಅಪಘಾತಗಳ ಬಗ್ಗೆ ಎಚ್ಚರ ವಹಿಸಬೇಕು. ಧೂಮಪಾನ, ಮದ್ಯಪಾನಗಳಿಂದ ದೂರ ಉಳಿಯಬೇಕು. ವಿದ್ಯಾರ್ಥಿನಿಲಯಕ್ಕೆ ಬಂದಿರುವ ಉದ್ದೇಶವನ್ನು ಮರೆಯಬಾರದು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದರು.
ವಿಖ್ಯಾತ ಉದ್ಯಮಿಗಳ ಮಕ್ಕಳು ದೊಡ್ಡ ದೊಡ್ಡ ಶಾಲೆಗಳಲ್ಲಿ ಓದಿದ್ದಾರೆ. ಆದರೆ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಮಹಾನ್ ವ್ಯಕ್ತಿಗಳು ಕಷ್ಟಪಟ್ಟು ಓದಿದ್ದಾರೆ. ಆದರೆ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಆದರ್ಶ ವ್ಯಕ್ತಿಗಳಂತೆ ಎಲ್ಲ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಉತ್ತಮ ಮಕ್ಕಳಾಗಿ, ಗುರು-ಹಿರಿಯರಿಗೆ ಉತ್ತಮ ವಿದ್ಯಾರ್ಥಿಯಾಗಿ ಶಿಸ್ತುಬದ್ಧವಾಗಿ ಬದುಕಬೇಕು ಎಂದರು.
ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರೀತಿ ಎಲ್.ಮಳವಳ್ಳಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ವಿಜಯ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಆರ್.ರವಿಕುಮಾರ್ ಇತರರಿದ್ದರು.