ಕೈಲಾದಷ್ಟು ಸಮಾಜ ಸೇವೆ, ದಾನ ಮಾಡಿ

30 lxr 2 PUNYARADHANE
Published on

ಲಕ್ಷ್ಮೇಶ್ವರ: ಬದುಕಿನ ಶಾಂತಿ, ನೆಮ್ಮದಿ, ಸಂಪತ್ತು, ಜ್ಞಾನ ಹೊಂದಲು ಗುರುವಿನ ಶ್ರೀರಕ್ಷೆ ಅವಶ್ಯ ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೇವಾಡಿಮಠದ ಲಿಂ. ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಧರ್ಮ ರಕ್ಷಣೆ, ಜಾಗೃತಿ, ಸಂಸ್ಕಾರ, ಸದ್ಗತಿ, ಸನ್ಮಾರ್ಗ, ತ್ರಿವಿಧ ದಾಸೋಹ ಸೇವೆ ನೀಡುವ ಮಠಾಧೀಶರಿಗೆ ಸಲ್ಲಿಸುವ ಭಕ್ತಿಯ ಕಾಣಿಕೆ(ಸೇವೆ) ಸಮಾಜದ ಉಪಯೋಗಕ್ಕೆ ಸಲ್ಲುತ್ತದೆ. ಜೀವನದಲ್ಲಿ ಬದುಕಿನ ಸಾರ್ಥಕತೆಗಾಗಿ ಕೈಲಾದ ಮಟ್ಟಿನ ಸಮಾಜ ಸೇವೆ, ದಾನ, ಧರ್ಮ ಮಾಡಬೇಕು ಎಂದರು.

ಸಾನ್ನಿದ್ಯ ವಹಿಸಿದ್ದ ಲಕ್ಷ್ಮೇಶ್ವರ ಕರೇವಾಡಿಮಠದ ಪಟ್ಟಾಧ್ಯಕ್ಷರಾದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಯುವ ಜನಾಂಗವು ಗುರು-ಹಿರಿಯರು ತೋರಿದ ಸನ್ಮಾರ್ಗ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಮರೆಯಬಾರದು. ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.

ಕರೇವಾಡಿಮಠದ ನಿಯೋಜಿತ ಉತ್ತರಾಧಿಕಾರಿ ಮಂಜುನಾಥ ದೇವರು ಮಾತನಾಡಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಧಾರ್ವಿುಕ ಪೂಜಾ ಕಾರ್ಯಕ್ರಮಗಳು ನಡೆದವು. ಶಂಕ್ರಯ್ಯ ಪೂಜಾರ, ಬಸಯ್ಯಶಾಸ್ತ್ರೀ ಸೂರಣಗಿಮಠ ಪೌರೋಹಿತ್ಯದಲ್ಲಿ ಜಂಗಮ ವಟುಗಳಿಗೆ ಆಯ್ಯಾಚಾರ, ಶಿವದೀಕ್ಷೆ ಕಾರ್ಯಕ್ರಮ ನಡೆದವು. ರುದ್ರಬಳಗದಿಂದ ರುದ್ರ ಪಠಣ ಸೇರಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಹರ್ಲಾಪುರದ ಶಾಂಭಯ್ಯ ಹಿರೇಮಠ ಅವರ ಜಾನಪದ ತಂಡದಿಂದ ಜಾಗೃತಿಗಾಗಿ ಜಾನಪದ ಕಾರ್ಯಕ್ರಮ, ಶಾರದಾ ಸ್ವರಾಂಜಲಿ ಸಂಗೀತ ಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ, ಹಳ್ಳದಕೇರಿ ಓಣಿಯ ಶಕ್ತಿ ಭಜನಾ ಸಂಘ, ಮಾರುತಿ ಭಜನಾ ಸಂಘ ದಿಂದ ಭಜನಾ ಕಾರ್ಯಕ್ರಮ ನಡೆದವು. ಸಂಗಯ್ಯ ಹಿರೇಮಠ, ಇತರರಿದ್ದರು. ಶಿವರಾಜಯ್ಯ ಕರೇವಾಡಿಮಠ ಹಾಗೂ ಬಿ.ಟಿ. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net