ಮಡಿಕೇರಿ : ಕೊಡಗು ಜಿಲ್ಲಾ ಲೋಕಾಯುಕ್ತ ಇಲಾಖೆ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಡಿವೈಎಸ್‌ಪಿ ಎಂ.ಎಸ್. ಪ್ರವೀಣ್‌ಕುಮಾರ್ ಸಾರ್ವಜನಿಕರಿಂದ ಬುಧವಾರ ದೂರುಗಳ ಅರ್ಜಿ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸಗಳನ್ನು ತಡ ಮಾಡದೆ, ಸೂಕ್ತ ಸಮಯದಲ್ಲಿ ಮಾಡಿಕೊಡಬೇಕು. ಯಾರೇ ಕಚೇರಿಗೆ ಬಂದರೂ, ಅವರನ್ನು ಕುಳ್ಳಿರಿಸಿ ನಗುಮುಖದಿಂದ ಕೆಲಸ ಮಾಡಿಕೊಡಬೇಕು. ತಮಗೆ ಸರ್ಕಾರಿ ಕೆಲಸ ಮಾಡುವ ಸಂದರ್ಭ ಯಾರಾದರೂ ಅಡ್ಡಿಪಡಿಸಿದರೆ, ಕೂಡಲೇ ಸೂಕ್ತ ದಾಖಲೆಯೊಂದಿಗೆ ಪೊಲೀಸ್ ಇಲಾಖೆ ದೂರು ನೀಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭ ಕಂದಾಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ರೈತರು ದೂರಿಕೊಂಡರು. ಕಳೆದ ಹಲವಾರು ವರ್ಷಗಳಿಂದ ತಮ್ಮ ದಾಖಲಾತಿಗಳನ್ನು ಸರಿಪಡಿಸಿಕೊಡುವಂತೆ ಕಂದಾಯ ಇಲಾಖೆಗೆ ಅಲೆಯುತ್ತಿದ್ದರೂ ಯಾವ ಕೆಲಸವು ಆಗುತ್ತಿಲ್ಲ ಎಂದು ಕಾವೇರಪ್ಪ ಅಳಲು ತೋಡಿಕೊಂಡರು. ತಮ್ಮ ಕೃಷಿ ಜಮೀನಿಗೆ ಹದ್ದು ಬಸ್ತು ಸರ್ವೆ ನಡೆಸಿ ದಾಖಲಾತಿ ಮಾಡಿಕೊಡುತ್ತಿಲ್ಲ ಎಂದು ಜೆ.ಎಸ್. ರಜನಿಕಾಂತ್ ಬೇಸರ ವ್ಯಕ್ತಪಡಿಸಿದರು. ಪೌತಿ ಖಾತೆ ವರ್ಗಾವಣೆ ಮಾಡಿಕೊಡದೆ ಸತಾಯಿಸುತ್ತಿರುವ ಬಗ್ಗೆ ರಾಧಮ್ಮ ದೂರಿದರು. ಜಯಮ್ಮ. ಸುಬ್ರಹ್ಮಣ್ಯ ಹಾಗೂ ಚೋಮಣಿ ತಮ್ಮ ಜಮೀನಿನ ದಾಖಲಾತಿ ಮಾಡಿಕೊಡದ ಬಗ್ಗೆ ಅಸಹಾಯಕತೆ ತೋಡಿಕೊಂಡರು.
ರೈತರಿಂದ ಅರ್ಜಿಗಳನ್ನು ಪಡೆದ ನಂತರ ರೈತರನ್ನು ಕಚೇರಿಗೆ ಅಲೆಸದೆ, ಕೆಲಸ ಮಾಡಿಕೊಡಿ. ಮಾಡಿಕೊಡಲು ಸಾಧ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹದೊಂದಿಗೆ ಅರ್ಜಿಯನ್ನು ಹಿಂದಿರುಗಿಸುವಂತೆ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಸ್.ಎನ್.ನರಗುಂದ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.