ಅಂಬೇಡ್ಕರ್ ಅವರನ್ನು ಆರಾಧನೆ ಸಾಲದು, ಆಶಯ ಅರ್ಥಮಾಡಿಕೊಳ್ಳಿ

mysore
Published on

ಮೈಸೂರು: ಅಂಬೇಡ್ಕರ್ ಅವರನ್ನು ಆರಾಧನೆ ಮಾಡಿದರೆ ಸಾಲದು, ಅವರ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಹೇಳಿದರು.


ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 133ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅಂಬೇಡ್ಕರ್ ಒಬ್ಬ ಮಹಾನ್ ಚೇತನ. ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅವರ ನಿಷ್ಠೆ, ಪ್ರಾಮಾಣಿಕತೆ, ಛಲ, ಪರಿಶ್ರಮ, ದೇಶಪ್ರೇಮ ಹಾಗೂ ನಿರಂತರ ಓದಿನ ಬಗ್ಗೆ ಆಸಕ್ತಿ ಹೊಂದಿದಾಗ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಅಂಬೇಡ್ಕರ್ ಆಗಿ ಪರಿವರ್ತನೆಯಾಗಲು ಸಾಧ್ಯ ಎಂದರು.


ಅವಮಾನಗಳನ್ನು ಮೆಟ್ಟಿ, ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಸನ್ಮಾನವನ್ನು ಪಡೆದ ಧೀಮಂತ ನಾಯಕ. ಅವರು ಬದುಕಿನುದ್ದಕ್ಕೂ ಸವಾಲು ಸ್ವೀಕರಿಸಿ ಸಂಯಮದ ಕುಲುಮೆಯಲ್ಲಿ ಬೆಂದು ಕಬ್ಬಿಣದಂತೆ ಗಟ್ಟಿಯಾಗಿ ನಿಂತವರು. ಅವರು ಸದಾ ಸಾಮಾಜಿಕ ಸಾಮರಸ್ಯಕ್ಕೆ ಹಾಗೂ ನೆಮ್ಮದಿಗೆ ಹೋರಾಡಿದರು. ಕಡು ಬಡವನಾದರೂ, ಸಮಾಜದ ನಿಂದನೆಗೆ ಒಳಗಾದರೂ, ಅವರ ಛಲವನ್ನು ಬಿಡದೆ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಆದರ್ಶ ಪ್ರಾಯರಾದವರು ಎಂದರು.


ಅವರ ಸಾಧನೆಗೆ ಕಾರಣವಾದದ್ದು ಶಿಕ್ಷಣ. ಆ ಶಿಕ್ಷಣವೇ ಪ್ರತಿಯೊಬ್ಬರ ಗುರಿಯಾಗಬೇಕೆಂಬುದು ಅವರ ಆಶಯವಾಗಿತ್ತು. ಇಂದಿನ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಸಮಯವನ್ನು ವ್ಯರ್ಥಮಾಡದೆ ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡು ಗುರಿ ಸಾಧಿಸುವುದರೆಡೆಗೆ ಮುನ್ನುಗ್ಗಬೇಕು ಎಂದು ತಿಳಿಸಿದರು.


ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಡೀನ್ ಡಾ.ಎಚ್.ಶ್ರೀಧರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net