

ಹೂವಿನಹಡಗಲಿ: ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ತಾಲೂಕಿನ ವಿವಿಧೆಡೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸರ್ಕಾರಿ ಕಚೇರಿ ಮತ್ತು ಇತರೆ ಸ್ಥಳಗಳ ಪರಿಶೀಲನೆ ನಡೆಸಿದರು.
ತಹಸೀಲ್ ಕಚೇರಿಯ ಸರ್ವೇ, ಅಬಕಾರಿ, ಕಂದಾಯ ವಿಭಾಗ, ಆಹಾರ ಸರಬರಾಜು ಹಾಗೂ ಇತರ ವಿಭಾಗಗಳಿಗೆ ಭೇಟಿ ನೀಡಿ, ಸ್ವಚ್ಛತೆ ಕೊರತೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಚೇರಿಯ ಸಮಯದಲ್ಲಿ ಇಲಾಖೆ ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಕಚೇರಿಗೆ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಿದರು. ಕಚೇರಿಗೆ ಇಲಾಖೆಯ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಹಾಜರಾಗಬೇಕು. ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರು ಅಲೆದಾಟಕೆ ಆಸ್ಪದ ನೀಡಬೇಡಿ.
ತಾಲೂಕಿನ ಹಿರೇಹಡಗಲಿ, ಹೊಳಲು ಗ್ರಾಮಗಳಲ್ಲಿನ ಮಳೆಯಿಂದ ಹಾನಿಗೀಡಾದ ಸ್ಥಳ ಮತ್ತು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೀಡಾದ ಮನೆಗಳಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳಲ್ಲಿ ಮೂರು ಹಂತಗಳಲ್ಲಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪತ್ರಿಕಾಗೋಷ್ಠಿ: ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಕಂದಾಯ ಇಲಾಖೆ ಸಂಬಂಧ ಪಟ್ಟಂತೆ ಇತರೆ ಇಲಾಖೆಗಳಲ್ಲಿಯೂ ಸಹ ಸಾಕಷ್ಟು ಕೆಲಸಗಳು ಹಾಗೆಯೇ ಉಳಿದಿದ್ದು ಅವುಗಳನ್ನು ಸಕಾಲದಲ್ಲಿ ಮಾಡಿ ಮುಗಿಸುವಂತೆ ತಿಳಿಸಲಾಗಿದೆ ಎಂದರು.
ತಾಲೂಕಿನಲ್ಲಿ ಬಹುತೇಕ ಭಾಗಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಇದೆ. ಈ ಕೂಡಲೇ ಇಲಾಖೆ ಅಧಿಕಾರಿಗಳಿಗೆ ಮಧ್ಯ ಮಾರಾಟ ಮಾಡುವವರ ಮೇಲೆ ನಿಗಾವಹಿಸಲು ತಿಳಿಸಲಾಗುವುದು. ಹಿರೇಹಡಗಲಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ದಾಸ್ತಾನು ನಿರ್ವಹಣೆ ಸರಿಯಾಗಿ ಕಂಡು ಬಾರದ ಹಿನ್ನಲೆಯಲ್ಲಿ ಅಲ್ಲಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ವಸತಿ ನಿಲಯಕ್ಕ ದೊರಕಬೇಕಾದ ಸೌಲಭ್ಯಗಳು ಸೂಕ್ತ ಸಮಯದಲ್ಲಿ ದೊರಕದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕಿನಲ್ಲಿ ಪೂರ್ಣ ಹಾನಿಗೀಡಾದ ಮನೆಗಳಿಗೆ 5 ಲಕ್ಷ ರೂ. ಭಾಗಶಃ ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ., ಹಾಗೂ ಅಲ್ಪಪ್ರಮಾಣದಲ್ಲಿ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂ.ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.