

ಪ್ರಚಾರದ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸಹಕರಿಸ ಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ ರಾಜೇಂದ್ರ ಎಂದು ಮನವಿ ಮಾಡಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜಕೀಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯ ನಾಯಕರು ದೇಣಿಗೆ ಪಡೆಯುತ್ತಿರುವ ವರದಿಗಳು ಪತ್ರಿಕೆಗಳಲ್ಲಿ ವರದಿಗಳು ಬರುತ್ತಿವೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ದೇವಸ್ಧಾನದಲ್ಲಿ ಪೂಜಾ ತಟ್ಟೆಗೆ ದಕ್ಷಿಣೆ ಹಾಕಿದರೂ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಅದರ ಬದಲು ಹುಂಡಿಗೆ ಹಣ ಹಾಕಬೇಕು ಎಂದರು.
ರಾಜಕೀಯ ರ‌್ಯಾಲಿ, ಸಮಾರಂಭ ಹಾಗೂ ವಾಹನ ಬಳಸಲು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಒಬ್ಬ ಅಭ್ಯರ್ಥಿಯು 40 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ಪ್ರಚಾರದ ಪ್ರತಿಯೊಂದು ಖರ್ಚನ್ನು ಲೆಕ್ಕ ಇಡಬೇಕು. ಆನ್‌ಲೈನ್ ಮೂಲಕವು ನಾಮ ಪತ್ರ ಸಲ್ಲಿಸಬಹುದು. ಸ್ಟಾರ್ ಕ್ಯಾಪೈನರ್ ಪ್ರಚಾರ ಮಾಡುವಾಗ ಅಭ್ಯರ್ಥಿ ವೇದಿಕೆಯ ಮೇಲೆ ಇದ್ದರೆ ಅಥವಾ ಬ್ಯಾನರ್‌ನಲ್ಲಿ ಅಭ್ಯರ್ಥಿಯ ಭಾವಚಿತ್ರ ಇದ್ದಾರೆ ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ ಹಾಕಲಾಗುತ್ತದೆ. ಕರಪತ್ರಗಳ ಮುದ್ರಣದಲ್ಲಿ ಮುದ್ರಣಗಳ ಸಂಖ್ಯೆ ಹಾಗೂ ಮುದ್ರಣದ ವಿಳಾಸ ಕಡ್ಡಾಯವಾಗಿ ಮುದ್ರಿಸಿರಬೇಕು ಎಂದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ಚುನಾವಣಾ ತಹಶೀಲ್ದಾರ್ ರಾಮಪ್ರಸಾದ್ ಹಾಗೂ ಇತರರು ಇದ್ದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಮತದಾನದ ಹಕ್ಕನ್ನು ಚಲಾಯಿಸುವ ದೃಷ್ಟಿಯಿಂದ ಅಂಚೆ ಮತಪತ್ರಗಳ ನಿರ್ವಹಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿ, ಮತಗಟ್ಟೆ ಅಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೆಎಸ್‌ಆರ್‌ಟಿಸಿ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್ ಹಾಗೂ ಇತರೆ ಸಿಬ್ಬಂದಿ ಮತ್ತು ಸೇವಾ ಮತದಾರರುಗಳಿಗೆ ಅಂಚೆಮತ ಪತ್ರಗಳ ಮುಖಾಂತರ ಮತದಾನದ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಆಯಾ ವಿಧಾನಸಭಾ ಕ್ಷೇತ್ರದ ರಿಟರ್‌ನಿಂಗ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅವರ ವ್ಯಾಪ್ತಿಯಲ್ಲಿ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ, ಕೆಎಸ್‌ಆರ್‌ಟಿಸಿ ನಗರ ಮತ್ತು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವ್ಯಾಪ್ತಿಯಲ್ಲಿಯೂ ಸಹ ಪ್ರತ್ಯೇಕ ಪತ್ರಾಂಕಿತ ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯ ಎಲ್ಲ 11 ವಿಧಾನಸಭಾ ಕ್ಷೇತ್ರದ ರಿಟರ್‌ನಿಂಗ್ ಆಫೀಸರ್ ವ್ಯಾಪ್ತಿಯಲ್ಲಿ ಏ.22, 23 ವಿಧಾನಸಭಾ ಕ್ಷೇತ್ರವಾರು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಕೇಂದ್ರಗಳಲ್ಲಿ ಅಂಚೆ ಮತಪತ್ರದ ಸಹಾಯವಾಣಿ (ಜಿಲ್ಲಾ ಡೆಸ್ಕ್) ತೆರೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಎಲ್ಲ ಇಲಾಖಾಧಿಕಾರಿ, ಸಿಬ್ಬಂದಿ ವರ್ಗದವರು, ಮತಗಟ್ಟೆ ಅಧಿಕಾರಿ, ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ವಾಹನಗಳ ಚಾಲಕರು ನಿರ್ವಾಹಕರು ಮತ್ತು ಫೋಟೋಗ್ರಾಫರ್, ವಿಡಿಯೋ ಗ್ರಾಫರ್‌ಗಳು ತಮ್ಮ ವಿಧಾನ ಸಭಾ ಕ್ಷೇತ್ರದ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಕ್ರಮ ಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಒಳಗೊಂಡಂತ ಅಂಚೆ ಮತ ಪತ್ರದ ಕೋರಿಕೆ ಅರ್ಜಿ ನಮೂನೆ 12 ರಲ್ಲಿ ಆಯಾ ಅಂಚೆ ಮತ ಪತ್ರದ ನೋಡಲ್ ರಿಟರ್‌ನಿಂಗ್ ಅಧಿಕಾರಿಗಳಿಗೆ ತರಬೇತಿ ದಿನಾಂಕದಂದು ನೀಡಬೇಕು.
ತರಬೇತಿಗೆ ಹಾಜರಾಗುವ ಮತಗಟ್ಟೆ ಅಧಿಕಾರಿಗಳು ಹೊರ ಹೊರ ಜಿಲ್ಲೆಯವರಾಗಿದ್ದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಆದೇಶ ಪ್ರತಿ ಮತ್ತು ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್)ಯೊಂದಿಗೆ ನಮೂನೆ 12ಅನ್ನು ಭರ್ತಿಮಾಡಿ ಸಂಬಂಧಿಸಿದ ಅಂಚೆ ಮತ ಪತ್ರದ ನೋಡಲ್ ಅಧಿಕಾರಿಗಳಿಗೆ ನೀಡಬೇಕು. ಅಂಚೆ ಮತಪತ್ರ ನೋಡಲ್ ಅಧಿಕಾರಿಗಳು ಏ.24 ರ ಬೆಳಗ್ಗೆ 11ಕ್ಕೆ ಹೊರ ಜಿಲ್ಲೆಗೆ ಹೋಗುವ ನಮೂನೆ 12 ರ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.