

ಹಿರೀಸಾವೆ: ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರೈತರು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.
ಇಲ್ಲಿನ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಗ್ರಾಮ ಪಂಚಾಯಿತಿ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ವರ್ಷದಲ್ಲಿ 2-3 ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಬದಲಾವಣೆಯೇ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಗೋಬಿ ಸೇರಿದಂತೆ ಇತರ ಆಹಾರಗಳಲ್ಲಿ ಕೆಮಿಕಲ್ ಅಂಶಗಳು ಪತ್ತೆಯಾಗಿರುವುದು ತಿಳಿದುಬಂದಿದೆ. ವ್ಯಾಪಾರ ಮಾಡಿ, ಆದರೆ ಅಪಾಯಕಾರಿ ಅಂಶಗಳಿರುವ ಪದಾರ್ಥಗಳನ್ನು ಬಳಸಬೇಡಿ. ಇದರಿಂದ ಜನರು ಆರೋಗ್ಯದ ಜತೆಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಿ ಸುಮಾರು 12ರಿಂದ 14 ಔಷಧಗಳನ್ನು ಸರ್ಕಾರ ನಿಷೇಧ ಮಾಡಿದೆ. ತಾಲೂಕು ವ್ಯಾಪ್ತಿಯ ಯಾವುದೇ ಮೆಡಿಕಲ್ ಶಾಪ್‌ಗಳಲ್ಲಿ ಅಂಥ ಔಷಧ ಹಾಗೂ ಮಾತ್ರೆಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
2 ತಿಂಗಳಿಂದ ಹಾಸನ ಜಿಲ್ಲೆಯಲ್ಲಿ 55ಕ್ಕೂ ಹೆಚ್ಚು ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆ ಇದ್ದವರಲ್ಲಿಯೇ ಹೆಚ್ಚು ಕಂಡುಬಂದಿದೆ. ಹಾಗಾಗಿ ಯೋಗ, ಧ್ಯಾನ ಹಾಗೂ ಆಹಾರ ಪದ್ಧತಿ ಅನುಸರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್ ಮಾತನಾಡಿ, ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯ ಸಂಪಾದನೆ ಮುಖ್ಯ. ಇವತ್ತಿನ ದಿನದಲ್ಲಿ ಹಣ ಗಳಿಸಲು ಹತ್ತಾರು ಮಾರ್ಗಗಳಿವೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಪೌಷ್ಟಿಕ ಆಹಾರ ಸೇವನೆ, ಯೋಗ, ಧ್ಯಾನ ಹಾಗೂ ಉತ್ತಮ ದಿನಚರಿ ಅನುಸರಿಸುವುದು ಅಗತ್ಯ ಎಂದರು.
ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಶಿಬಿರ ನಡೆಯಿತು. ವೈದ್ಯರ ಜತೆಗೆ 40 ವೈದ್ಯಕೀಯ ವಿದ್ಯಾರ್ಥಿಗಳು ಕರ್ತವ್ಯನಿರ್ವಹಿಸಿದರು. ಬಿಪಿ, ಶುಗರ್, ಮಂಡಿನೋವು, ಪೈಲ್ಸ್, ಮೂಗು ಮತ್ತು ಗಂಟಲು ಸಮಸ್ಯೆ, ಸ್ತ್ರೀ ರೋಗಗಳು ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು. 280ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ, ಮಾಜಿ ಅಧ್ಯಕ್ಷ ಎಚ್.ಇ.ಬೋರಣ್ಣ, ಪಿಎಸಿಸಿಬಿ ಅಧ್ಯಕ್ಷ ಎಚ್.ಜೆ.ಮಹೇಶ್, ನಿರ್ದೇಶಕ ಬಾಬು, ಕಾರ್ಯದರ್ಶಿ ಹರೀಶ್, ಕಸಾಪ ಉಪಾಧ್ಯಕ್ಷ ಗೋವಿಂದರಾಜ್(ಜೀವಿ), ನಿಕಟ ಪೂರ್ವ ಅಧ್ಯಕ್ಷ ಎಚ್.ಪಿ.ಶಂಕರ್, ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ.ಸುಪ್ರಿತ್, ಡಾ.ಕಿರಣ್, ಪ್ರಮುಖರಾದ ರವಿಕುಮಾರ್, ದಿನೇಶ್, ರವಿ ಇತರರು ಇದ್ದರು.