ಕುಡಿಯುವ ನೀರಿನ ಯೋಜನೆಗೆ ಕೆರೆ ಜಾಗ ಬಳಸದಿರಿ

Makari villagers appeal
Published on

ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಕೆರೆಯ ಜಾಗವನ್ನು ಸ್ವಾಧೀನ ಮಾಡಲಾಗುತ್ತಿದೆ. ಈ ಕೆರೆಯು ರೈತರು, ಜಾನುವಾರು ಮತ್ತು ಕೃಷಿ ಚಟುವಟಿಕೆಗೆ ಪೂರಕವಾಗಿದ್ದು, ಭೂಸ್ವಾದೀನವನ್ನು ಕೈಬಿಟ್ಟು ಬೇರೆ ಜಾಗವನ್ನು ಯೋಜನೆಗೆ ಬಳಸಬೇಕು ಎಂದು ಮಕರಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ಚಂದ್ರಪ್ಪ ನಿಂಬೆಗುಂದಿ ಮತ್ತು ಬಸವರಾಜ ಹೊಸಮನಿ ಮಾತನಾಡಿ, ಮಕರಿ ಗ್ರಾಮದಲ್ಲಿ 84 ಎಕರೆ ವಿಸ್ತೀರ್ಣದ ಕೆರೆ ಇದೆ. ಈ ಕೆರೆ ಊರಿನ ಜಲಮೂಲವಾಗಿದೆ. ಕೆರೆ ನೀರಿನಿಂದ 300 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಗ್ರಾಮಕ್ಕೆ ಆಧಾರವಾಗಿರುವ 3 ಕೊಳವೆ ಬಾವಿಗಳು ಈ ಕೆರೆಯ ಭಾಗದಲ್ಲಿವೆ. 40 ವರ್ಷಗಳಿಂದ ಈ ಬೋರ್​ವೆಲ್​ಗಳಲ್ಲಿ ನೀರು ಕಡಿಮೆಯಾಗಿಲ್ಲ. ಬೋರ್​ವೆಲ್ ನೀರನ್ನು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಶುದ್ಧೀಕರಿಸಿ ನಿತ್ಯ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಕೆರೆ ಭೂಸ್ವಾಧೀನ ಮಾಡಿದರೆ ಬೋರ್​ವೆಲ್​ಗಳ ಮುಚ್ಚಿ ಹೋಗಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕೆರೆಯ ಮೇಲ್ಭಾಗದಲ್ಲಿ ಸಾಕಷ್ಟು ಜಾಗವವಿದ್ದು, ಅದನ್ನು ಬಳಸಿ ಕೆರೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಯೋಜನೆಗಾಗಿ ಕೆರೆಯ ಜಾಗ ಬಳಸುವುದಿಲ್ಲ. ಕೆರೆ ಮೇಲ್ಭಾಗದಲ್ಲಿನ ಸ್ಥಳವನ್ನು ಬಳಸಲಾಗುವುದು ಎಂಬ ಮಾಹಿತಿ ನಮಗೆ ನೀಡಲಾಗಿತ್ತು. ಮಕರಿ ಗ್ರಾಮದ ಯೋಜನೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗ್ರಾಮಸ್ಥರು-ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮಸ್ಥರಾದ ಕೊಟ್ರೇಶ ಹುಲ್ಮನಿ, ನಾಗಪ್ಪ ನಿಂಬೆಗುಂದಿ, ಮಲ್ಲಿಕಾರ್ಜುನ ಪೂಜಾರ, ದಾನಪ್ಪ ನಿಟ್ಟೂರ, ಶಿವಾನಂದ ಹುಲ್ಲತ್ತಿ, ಕರೇಗೌಡ ಬಸವನಾಳ, ರಾಜು ಬಣಕಾರ, ಭರಮಗೌಡ ಗಂಗೋಳ, ವೀರನಗೌಡ ನಿಂಬೆಗುಂದಿ, ವೀರಪ್ಪ ಜೋಗಿಹಳ್ಳಿ, ಭರಮಗೌಡ ನ್ಯಾಮತಿ, ಉಮೇಶ ಬಣಕಾರ, ಕಿರಣ ಶಿದ್ಗೇರಿ, ಪ್ರಭು ನಾಗಣ್ಣನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net