

ಶ್ರೀರಂಗಪಟ್ಟಣ: ಸಾಂವಿಧಾನಿಕ ಹಕ್ಕುಗಳ ಮೂಲಕ ಶೋಷಿತರನ್ನು ಸಮಾಜದ ಮುನ್ನೆಲೆಗೆ ತರಲು ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಬೇಕೆ ಹೊರತು, ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಅಂಬೇಡ್ಕರ್ ಅಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ತಾಲೂಕಿನ ಕಡತನಾಳು ಗ್ರಾಮದಲ್ಲಿ ಸೋಮವಾರ ದಮ್ಮ ದೀಕ್ಷಾ ದಿನ ಪ್ರಯುಕ್ತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಮೂಲಕ ಜ್ಞಾನದ ಬೆಳಕು ಮೂಡಲಿದೆ ಎಂಬುದನ್ನು ತಮ್ಮ ಶ್ರಮ ಹಾಗೂ ತ್ಯಾಗದ ಮೂಲಕ ದೇಶಕ್ಕೆ ತೋರಿಸಿಕೊಟ್ಟು ವಿಶ್ವನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಈಡೇರಲು ಪ್ರತಿಯೊಬ್ಬರು ಶಿಕ್ಷಿತರಾಗಬೇಕು. ಯಾವುದೇ ಊರು ಅಥವಾ ಪಟ್ಟಣಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪಿಸಿ ಸುಮ್ಮನಾದರೆ ಸಾಲದು, ಅವರ ಪ್ರತಿಮೆ ನೋಡಿ ನಾವು ಅವರಂತೆ ಆಗುತ್ತೇವೆ ಎಂಬ ಗುರಿ ಹೊಂದಬೇಕು. ದೇಶವಾಗಲಿ, ರಾಜ್ಯವಾಗಲಿ ನಮ್ಮ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರನ್ನು ಪಕ್ಷಗಳ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮಕ್ಕಳು, ಯುವ ಸಮೂಹ ಡಾ.ಅಂಬೇಡ್ಕರ್ ಅವರನ್ನು ಆದರ್ಶವಾಗಿ ಸ್ವೀಕರಿಸಿ ಸಮಾಜದಲ್ಲಿ ಸಮಾನತೆಯೊಂದಿಗೆ ದೇಶದ ಅಭಿವೃದ್ಧಿಗೆ ಕಾರಣೀಕೃತರಾಗಬೇಕು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಬಾಬಾ ಸಾಹೇಬರು ತಾವು ಅನುಭವಿಸಿದ ನೋವು ಸಹಿಸಿ ಶಿಕ್ಷಣ ಕಲಿತು ತಮಗಾದ ಅನ್ಯಾಯ ಶೋಷಿತರಿಗೆ ಆಗಬಾರದು ಎಂಬ ಕಾರಣಕ್ಕೆ ಸಂವಿಧಾನ ರಚಿಸಿದರು. ಯಾವ ಪ್ರಜೆಗೂ ವಂಚನೆಯಾಗದಂತೆ ಸಮಾನತೆಯಿಂದ ಜೀವಿಸುವ, ಶಿಕ್ಷಣ ಪಡೆಯುವ, ಹೋರಾಟಗಳಿಂದ ಅನ್ಯಾಯ ಪ್ರಶ್ನಿಸುವ ಮೂಲಭೂತ ಹಕ್ಕುಗಳು ಸಿಕ್ಕಿವೆ. ಶಾಂತಿಯುತ ಬದುಕನ್ನು ಅರಸಿದ ಅವರು ಯಾವ ಧರ್ಮಕ್ಕೂ ಒಳಪಡದೆ ತ್ಯಾಗ ಮತ್ತು ಶಾಂತಿ ಸಂದೇಶ ಮಾರ್ಗದ ಬುದ್ಧನ ಪಂಚಶೀಲ ತತ್ವಗಳನ್ನು ಅನುಸರಿಸಲು ಬೌದ್ಧ ದಮ್ಮ ಸ್ವೀಕರಿಸಿದರು. ಅವರಲ್ಲಿನ ಬದುಕಿನ ನೀತಿಗಳನ್ನು ನಾವು ಅರಿತು ಜಾಗೃತರಾಗಬೇಕು ಎಂದರು.
ನಗುವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಸಿ.ಕೆ.ಮಮತಾ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬೌದ್ಧ ಧರ್ಮ ಕುರಿತು ಉಪನ್ಯಾಸ ನೀಡಿದರು. ವಿಧಾನಸೌಧದ ವಸತಿ ಇಲಾಖೆಯ ಉಪಕಾರ್ಯದರ್ಶಿ ಸಿ.ಶಿವಣ್ಣ ಲಾಲಿಪಾಳ್ಯ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದರು. ಬಳಿಕ ವೇದಿಕೆಯಲ್ಲಿ ಹಲವು ಸಾಧಕರನ್ನು ಗಣ್ಯರು ಸನ್ಮಾನಿಸಲಾಯಿತು.
ದಸರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿನಿ, ಉಪಾಧ್ಯಕ್ಷ ಮೋಹನ್ ಕುಮಾರ್, ಸದಸ್ಯರಾದ ದಾಕ್ಷಾಯಿಣಿ, ಸುಜಯ್, ಮಾದೇಶ್, ಪಿಡಿಒ ಕೆ.ಆರ್.ಕೃಷ್ಣಪ್ಪಗೌಡ, ಮುಖಂಡರಾದ ಕೆ.ಶೆಟ್ಟಹಳ್ಳಿ ಅಪ್ಪಾಜಿ, ರಾಂಪುರ ವಿಜಯೇಂದ್ರ ಪುಟ್ಟು, ಕಡತನಾಳು ಗ್ರಾಮಸ್ಥರು ಇತರರು ಇದ್ದರು.