

ನರಗುಂದ: ಪಟ್ಟಣದ ಶಾರದಾಂಬಾ, ನವಚೇತನ ಹಾಗೂ ವಿವೇಕಾನಂದ ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಆದರೂ 2014ರಿಂದಲೇ ಅನಧಿಕೃತವಾಗಿ ಪ್ರವೇಶಾತಿ ನೀಡಲಾಗುತ್ತಿದೆ. ಈ ಮೂರು ಶಾಲೆಗಳಲ್ಲಿ 6, 7ನೇ ತರಗತಿಗಳನ್ನು ನಡೆಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವಲಿಂಗಪ್ಪ ಜಿ. ತಿಳಿಸಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ಶನಿವಾರ ಏರ್ಪಾಟಾಗಿದ್ದ ಮೂರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.
2014ರಲ್ಲಿ ನರಗುಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಂಗಳಾ ಪಾಟೀಲ ಅವರ ಪ್ರಮಾದದಿಂದ ಈ ಮೂರು ಶಾಲೆಗಳಲ್ಲಿ 6, 7ನೇ ತರಗತಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಈ ವರ್ಗಗಳನ್ನು ನಡೆಸಬಾರದು ಎಂದು ಡಿಡಿಪಿಐ ಸ್ಪಷ್ಟನೆ ನೀಡಿದರು.
1ರಿಂದ 5ರ ವರೆಗಿನ ತರಗತಿಗಳಿಗೆ ಮಾತ್ರ ಅವಕಾಶವಿದೆ. 6, 7ನೇ ತರಗತಿಗೆ ಪ್ರವೇಶ ನೀಡುವಂತಿಲ್ಲ. ಈ ಆದೇಶಕ್ಕೆ ಸಹಮತ ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ರಾಜು ಮಾತನಾಡಿ, ಇಲಾಖೆಯ ಆದೇಶ ಪಾಲಿಸಿಯೇ ಪಟ್ಟಣದ ಮೂರು ಶಾಲೆಗಳಲ್ಲಿ ಅನಧಿಕೃತವಾಗಿ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಶಾಲಾ ಆಡಳಿತ ಮಂಡಳಿ ಸದಸ್ಯರು ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.