

ಕುಶಾಲನಗರ: ಜೇನು ಕುರುಬ ಸಮುದಾಯವನ್ನು ಗಟ್ಟಿಯಾಗಿ ಸಂಘಟಿಸಿ ಆ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸುವುದರ ಜತೆಗೆ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ದನಿ ಎತ್ತಬೇಕಿದೆ ಎಂದು ಜೇನು ಕುರುಬರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಜೆ.ಟಿ.ರಾಜಪ್ಪ ಸಲಹೆ ನೀಡಿದರು.
ಯಡವನಾಡು ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೇನು ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇತರ ಕೆಲವು ಜನಾಂಗದವರು ನಮಗೆ ದೊರೆಯಬೇಕಾದ ಸೌಲಭ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ. ಜೇನು ಕುರುಬ ಜನಾಂಗದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರವಹಿಸಬೇಕಿದೆ. ಆಮಿಷಗಳಿಗೆ ಬಲಿಯಾಗಿ ಜನಾಂಗದವರು ಮತಾಂತರಗೊಳ್ಳುವುದು ನಿಲ್ಲಬೇಕಿದೆ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ನಮ್ಮ ಸಂಸ್ಕೃತಿ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಸವಣ್ಣ ಮಾತನಾಡಿ, ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡುವಂತಾಗಬೇಕಿದೆ. ವಿದ್ಯಾಭ್ಯಾಸ ಪಡೆದುಕೊಳ್ಳಲು ಮುಂದಾಗಬೇಕು. ಎಲ್ಲರೂ ಒಗ್ಗೂಡಿ ಶ್ರಮಿಸಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಜೇನು ಕುರುಬ ಸಮದಾಯದ ಮುಖಂಡ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಮಾಜಿ ನಿರ್ದೇಶಕ ಜೆ.ಟಿ.ಕಾಳಿಂಗ ಮಾತನಾಡಿ, ಸಮುದಾಯದವನ್ನು ಎಚ್ಚರಿಸಿ ಸಂಘಟಿತರನ್ನಾಗಿಸಲು ಅವರಲ್ಲಿ ಅಗತ್ಯ ಅರಿವು, ಜಾಗೃತಿ ಮೂಡಿಸಲು ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಯಡವನಾಡು ಹಾಡಿಯ ನಂಜಣ್ಣ ಮಾತನಾಡಿ, ಸರ್ಕಾರ ಸೌಲಭ್ಯಗಳನ್ನು ಕೊಟ್ಟರೂ ಅರಣ್ಯ ಇಲಾಖೆ ನಮಗೆ ನಿರಂತರವಾಗಿ ಅಡ್ಡಿ ಮಾಡುತ್ತಿದೆ. ಸೂರು, ನೀರಿಲ್ಲದ ಪರಿಸ್ಥಿತಿಯಲ್ಲಿ ಜೇನು ಕುರುಬ ಜನಾಂಗ ಇಂದಿಗೂ ಜೀವನ ಸಾಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೇನು ಕುರುಬರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಚಂದ್ರು, ಮುಖಂಡ ಜೆ.ಕೆ.ತಿಮ್ಮ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಸಿದ್ದು, ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ ಸಂಸ್ಥಾಪಕ ರಮೇಶ್, ಯಡವನಾಡಿನ ರವಿ, ಮಾಲಂಬಿ ರಮೇಶ್, ಸಜ್ಜಳ್ಳಿ ವಿಶ್ವ, ಚಂದ್ರು, ಸೂಳೆಬಾವಿ ಹರೀಶ್, ಕೆ.ಬಾಡಗದ ಮಣಿ ಇದ್ದರು.