ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ

RON APARADHA TADE
Published on

ರೋಣ: ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಯುವಜನತೆ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದಾರೆ. ಜಾಲತಾಣಗಳಲ್ಲಿ ಯಾರೊಬ್ಬರೂ ವೈಯಕ್ತಿಕ ವಿಚಾರ ಹಂಚಿಕೊಳ್ಳಬಾರದು. ಆ ಮೂಲಕ ಸೈಬರ್ ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ರೋಣ ಪಿಎಸ್​ಐ ಪ್ರಕಾಶ ಬಣಕಾರ ಹೇಳಿದರು.

ಪಟ್ಟಣದ ಕೆಎಸ್​ಎಸ್ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೈಬರ್ ಅಪರಾಧ ಪ್ರಕರಣಗಳು ಹಳ್ಳಿಗಳಿಗೂ ವ್ಯಾಪಿಸುತ್ತಿದ್ದು, ಇಂಥ ಪ್ರಕರಣದಲ್ಲಿ ತೊಡಗಿರುವವರು ಇಲಾಖೆಗಿಂತ ಬುದ್ಧಿವಂತರಂತೆ ವರ್ತಿಸುತ್ತಾರೆ. ಸೈಬರ್ ಅಪರಾಧ ಪ್ರಕರಣಗಳಲ್ಲಿ ವಂಚಕರು ದಿನನಿತ್ಯ ಕೋಟ್ಯಂತರ ರೂಪಾಯಿ ಪೀಕುತ್ತಿದ್ದಾರೆ. ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಲು ನಮ್ಮ ಮೊಬೈಲ್​ಗಳಲ್ಲಿ ಯಾವುದೇ ಅನಧಿಕೃತ ಆಪ್ ಅಥವಾ ಲಿಂಕ್​ಗಳಿಗೆ ಪ್ರತಿಕ್ರಿಯೆ ನೀಡಬಾರದು. ಅಲ್ಲದೆ, ಅಪರಿಚಿತರಿಂದ ಆದಷ್ಟು ಜಾಗರೂಕರಾಗಿ ವರ್ತಿಸಬೇಕು. ವಂಚನೆಗೊಳಗಾದ ಕೆಲವೇ ನಿಮಿಷಗಳಲ್ಲಿ 1930 ನಂಬರ್​ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ತಿಳಿಸಿದರು.

ಯುವಜನತೆ ಮಾದಕ ವಸ್ತುಗಳ ಸಹವಾಸದಿಂದ ದೂರವಿದ್ದು, ಯಾರಾದರೂ ಅಕ್ರಮವಾಗಿ ಮಾದಕ ವಸ್ತು ಮಾರುತ್ತಿರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.

ಕನಕದಾಸ ಶಿಕ್ಷಣ ಸಮಿತಿ ಸ್ಥಾನಿಕ ಮುಖ್ಯಸ್ಥ ಐ.ಬಿ. ದಂಡಿನ, ಪ್ರಾಚಾರ್ಯ ಸಿ.ಬಿ. ಪೊಲೀಸಪಾಟೀಲ, ಎನ್​ಎಸ್​ಎಸ್ ಶಿಬಿರಾಧಿಕಾರಿ ಎಸ್.ಆರ್. ನದಾಫ, ಉಪನ್ಯಾಸಕರಾದ ಎಸ್.ವಿ. ಸಂಕನಗೌಡ್ರ, ಎಸ್.ಎ. ನದಾಫ, ಕೆ.ಕೆ. ಹಿರೇಕಲ್ಲಪ್ಪನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net