

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅಂಗಡಿ, ಮಳಿಗೆಗಳಿಗೆ ಭೇಟಿ ನೀಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ವೇಳೆ ಪರಿಶೀಲನೆ ನಡೆಸಿದ ಅವರು, ಕೆಲವು ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ತಂಬಾಕು ಉತ್ಪನ್ನ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಮಾರಾಟ ಮಾಡದಂತೆ ಮಾಲೀಕರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಮಾರಾಟ ಮಾಡಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಾಲಾರ್ ಕಡೆಗೆ ತೆರಳುವ ವಾಹನಗಳ ಪಾರ್ಕಿಂಗ್ ಸ್ಥಳಕ್ಕೆ ತೆರಳಿದ ವೇಳೆ ಕೆಲವರು ಅಂಗಡಿಗಳ ಮುಂಭಾಗದಲ್ಲಿ ಶೀಟ್ ಅಳವಡಿಸಿಕೊಂಡಿದ್ದ ಕಾರಣ ಪಾರ್ಕಿಂಗ್‌ಗೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂತು. ಈ ವೇಳೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ಶೀಟ್ ತೆರವುಗೊಳಿಸಲಾಯಿತು. ದಾಸೋಹ ಭವನಕ್ಕೆ ತೆರಳಿದ ಅವರು, ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ನೌಕರರಿಗೆ ತಿಳಿಸಿದರು.
ಹೊಸ ದಾಸೋಹ ಭವನಕ್ಕೆ ಅನುಮತಿ: ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ಆದರೆ ಪ್ರಸ್ತುತವಿರುವ ದಾಸೋಹ ಭವನ ಸುಮಾರು 30 ವರ್ಷದ್ದಾಗಿದ್ದು, ಭಕ್ತರ ಸಂಖ್ಯೆಗೆ ಅನುಗುಣವಾಗಿ ಸಾಲುತ್ತಿಲ್ಲ. ಹಾಗಾಗಿ ಹೊಸ ದಾಸೋಹ ಭವನ ಅಗತ್ಯವಿದೆ. ಈ ಸಂಬಂಧ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಅನುಮತಿ ದೊರೆತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳ ಗುರುತಿಸಿ ಕ್ರಿಯಾಯೋಜನೆ ತಯಾರಿಸಿ ಹೊಸ ದಾಸೋಹ ಭವನ ನಿರ್ಮಿಸಲು ಅಗತ್ಯ ಕ್ರಮವಹಿಸಲಾಗುವುದು. ಅಲ್ಲಿಯವರೆಗೆ ಪ್ರಸ್ತುತವಿರುವ ದಾಸೋಹ ಭವನದಲ್ಲಿ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದರ ಜತೆಗೆ ಬಣ್ಣ ಬಳಿಸಲಾಗುವುದು ಎಂದು ಎ.ಈ. ರಘು ವಿಜಯವಾಣಿಗೆ ತಿಳಿಸಿದರು.