

ಸಿಂಧನೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಬಲಿ ನಡೆಯುತ್ತಿರುವುದು ಪಾಪದ ಕೃತ್ಯವಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ಅಂಬಾಮಠದ ಅಂಬಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ನೀಡಲಾಗುತ್ತದೆ ಎಂಬುದು ಗಮನಕ್ಕೆ ಬಂದಿದೆ. ಈ ಕುರಿತು ತಹಸೀಲ್ದಾರ್ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ.
1959ರಲ್ಲಿಯೇ ರಾಜ್ಯದಲ್ಲಿ ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಜಾತ್ರೆಗಳಲ್ಲಿ ಪ್ರಾಣಿಬಲಿ ತಡೆಯಲು ಆಗಿಲ್ಲ. ಕಳೆದ 30 ವರ್ಷಗಳಿಂದಲೂ ಪ್ರಾಣಿಬಲಿ ನೀಡದಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಆದರೆ, ಇನ್ನೂ ಪ್ರಾಣಿಬಲಿ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಣಿಬಲಿ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ.
ಲಕ್ಷಗಟ್ಟಲೆ ಪ್ರಾಣಿಗಳನ್ನು ದೇವರ ಹೆಸರಿನಲ್ಲಿ ಬಲಿ ಕೊಡುತ್ತಿರುವುದು ನೋವಿನ ಸಂಗತಿಯಾಗಿದೆ. ಮೂಕಪ್ರಾಣಿಗಳನ್ನು ಹಿಂಸಿಸದೆ ಜನ ಜಾಗೃತರಾಗಬೇಕು. ಪ್ರಾಣಿಗಳ ಮಾರಣಹೋಮ ತಪ್ಪಿಸಬೇಕು. ಮನುಷ್ಯರಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕು ಇದೆ ಎಂದು ತಿಳಿಸಿದರು.