ರೈತರಿಗೆ ಅನಗತ್ಯ ಒತ್ತಡ ಹಾಕದಿರಿ

IMG-20240912-WA0291
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ಸೆಸ್ಕ್ ವಿಭಾಗ ಕಚೇರಿಯ ಕಾರ್ಯಪಾಲಕ ಇಂಜಿನಿಯರ್ ರಮೇಶ್ ಅವರನ್ನು ಭೇಟಿ ಮಾಡಿದ ರೈತರು ಆರ್.ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆಯನ್ನು ಕೈಬಿಡುವಂತೆ ಆಗ್ರಹಿಸಿದರು.
Published on

ಕೆ.ಆರ್.ಪೇಟೆ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವಂತೆ ತಾಲೂಕಿನ ವಿದ್ಯುತ್ ಇಲಾಖೆ ನೌಕರರು ರೈತರಿಗೆ ಅನಗತ್ಯ ಒತ್ತಡ ಹಾಕುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.


ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ಸೆಸ್ಕ್ ವಿಭಾಗ ಕಚೇರಿಯ ಕಾರ್ಯಪಾಲಕ ಇಂಜಿನಿಯರ್ ರಮೇಶ್ ಅವರನ್ನು ಭೇಟಿ ಮಾಡಿದ ರೈತರು ಆರ್.ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆಯನ್ನು ಕೈಬಿಡುವಂತೆ ಆಗ್ರಹಿಸಿದರು.
ಸುಟ್ಟುಹೋದ ಟಿಸಿ ಬದಲಿಸಿಕೊಡಲು ಇಲಾಖೆ ಸೆಕ್ಷನ್ ಆಫೀಸರುಗಳು ಆರ್.ಆರ್ ನಂಬರಿಗೆ ಅಧಾರ್‌ಲಿಂಕ್ ಆಗಿದ್ದರೆ ಮಾತ್ರ ಟಿಸಿ ಬದಲಿಸುವುದಾಗಿ ಹೇಳುತ್ತಾರೆ. ಆಧಾರ್‌ಲಿಂಕ್ ಕಡ್ಡಾಯ ಎನ್ನುವ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿದರು.
ತಾಲೂಕಿನ ಬಹುತೇಕ ಕಡೆ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದು ಅಮಾಯಕ ರೈತರು ಮತ್ತು ಜಾನುವಾರುಗಳು ಬಲಿಯಾಗುತ್ತಿವೆ. ಹಳೆಯ ವಿದ್ಯುತ್ ವಾಹಕಗಳನ್ನು ಬದಲಿಸುತ್ತಿಲ್ಲ. ಲಿಂಗಾಪುರ ಬಳಿ ಕಂಬಗಳನ್ನು ಅಳವಡಿಸಿ ಒಂದು ತಿಂಗಳಾಗಿದೆ. ಕಂಬದಲ್ಲಿನ ವಿದ್ಯುತ್ ತಂತಿಗಳನ್ನು ಎಳೆದು ಸಮರ್ಪಕವಾಗಿ ಬಿಗಿಗೊಳಿಸದೆ ಇರುವ ಕಾರಣ ವಿದ್ಯುತ್ ತಂತಿಗಳು ಜೋತು ಬಿದ್ದಿವೆ ಎಂದು ದೂರಿದರು.
ಸುಟ್ಟು ಹೋದ ಟಿ.ಸಿ.ಗಳನ್ನು ಇಲಾಖೆ ವೆಚ್ಚದಲ್ಲಿಯೇ ರಿಪೇರಿ ಮಾಡಿಸಿ ಅಳವಡಿಸಿಕೊಡಬೇಕು. ಆದರೆ, ಕೆಲವು ಸಿಬ್ಬಂದಿ ಸುಳ್ಳು ಹೇಳಿ ಖಾಸಗಿಯವರ ಬಳಿಗೆ ರೈತರನ್ನು ಕಳುಹಿಸಿ ಸುಲಿಗೆ ಮಾಡುತ್ತಿದ್ದಾರೆ. ತಕ್ಷಣ ರೈತರ ಶೋಷಣೆ ನಿಲ್ಲಬೇಕು. ಲೈನ್‌ಮನ್‌ಗಳ ಸಭೆ ಕರೆದು ಸುಟ್ಟು ಹೋದ ಟಿ.ಸಿ.ಗಳನ್ನು ರಿಪೇರಿಗಾಗಿ ಖಾಸಗಿಯವರ ಬಳಿಗೆ ನೀಡದಂತೆ ಎಚ್ಚರಿಸುವಂತೆ ಆಗ್ರಹಿಸಿದರು.
ಕಾರ್ಯಪಾಲಕ ಇಂಜಿನಿಯರ್ ರಮೇಶ್ ಮಾತನಾಡಿ, ಆರ್.ಆರ್ ನಂಬರಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ. ಆದರೆ, ಸರ್ಕಾರದ ಸಹಾಯಧನ ಪಡೆಯಬೇಕಾದರೆ ಆಧಾರ್‌ಲಿಂಕ್ ಆಗಬೇಕು. ಸುಟ್ಟು ಹೋದ ಟಿ.ಸಿ ಗಳನ್ನು 24 ಗಂಟೆಯೊಳಗೆ ರಿಪೇರಿ ಮಾಡಿಸಲಾಗುವುದು. ಈ ಬಗ್ಗೆ ಎಲ್ಲ ಸೆಕ್ಷನ್ ಅಫೀಸರುಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಸ್ವಾಮೀಗೌಡ, ಮಹೇಶ್, ನಗರೂರು ಕುಮಾರ್, ನರಸಿಂಹೇಗೌಡ, ರಮೇಶ್, ಪುನೀತ್ ಇದ್ದರು.

1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net