

ಶಿವಮೊಗ್ಗ: ದಿನೇದಿನೆ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿಯುತ್ತಿರುವ ನಡುವೆಯೇ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಭತ್ತ ನಾಟಿ ಮಾಡದಂತೆ ಮತ್ತೊಮ್ಮೆ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಅಧಿಸೂಚನೆ ಪ್ರಕಟಿಸಿರುವ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತಾ, ಭತ್ತ ಬೆಳೆದು ರೈತರು ನಷ್ಟ ಅನುಭವಿಸಿದರೆ ಸರ್ಕಾರ ಯಾವುದೇ ಕಾರಣಕ್ಕೂ ಜವಾಬ್ದಾರಿ ಹೊರುವುದಿಲ್ಲ ಎಂದಿದ್ದಾರೆ.
ಆ.8ರಂದು ಭದ್ರಾ ನಾಲೆಯಲ್ಲಿ ನೀರು ಹರಿಸುವ ಸಂದರ್ಭದಲ್ಲೇ ಅಚ್ಚುಕಟ್ಟು ಭಾಗದ ರೈತರು ಅರೆನೀರಾವರಿ ಬೆಳೆಗಳನ್ನು ಬೆಳೆಯಬೇಕೆಂದು ಸೂಚನೆ ನೀಡಲಾಗಿತ್ತು. ಆದರೂ ಅನೇಕ ರೈತರ ಭತ್ತ ನಾಟಿ ಮಾಡಿದ್ದರು. ಈಗ ಜಲಾಶಯದಿಂದ ನೀರು ಹರಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಈ ವೇಳೆಯಲ್ಲೂ ಅನೇಕರು ಭತ್ತದ ಕೃಷಿಗೆ ಮುಂದಾಗಿರುವುದರಿಂದ ಎಚ್ಚರಿಕೆ ನೀಡಲಾಗಿದೆ.
ಎರಡು ದಿನಗಳ ಹಿಂದೆ ನಡೆದ ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲೂ ನೀರು ಹರಿಸುವುದನ್ನು ಮುಂದುವರಿಸುವ ಬಗ್ಗೆ ಸ್ಪಷ್ಟ ತೀರ್ಮಾನವಾಗಿಲ್ಲ. ಇನ್ನು ಮೂರ‌್ನಾಲ್ಕು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಆಗಸ್ಟ್‌ನಲ್ಲಿ ನಿರೀಕ್ಷೆಗೂ ಮೀರಿ ಮುಂಗಾರು ಕೈಕೊಟ್ಟಿರುವ ಕಾರಣ ಜಲಾಶಯದ ಸ್ಥಿತಿ ಚಿಂತಾಜನಕವಾಗಿದೆ. ಈ ಕಾರಣದಿಂದ ಭತ್ತ ನಾಟಿ ಮಾಡದಂತೆ ಸದಸ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.