ಮಕ್ಕಳ ಪಾಲನೆಯಲ್ಲಿ ಲೋಪವಾಗದಿರಲಿ

CDPO
Published on

ಶಿರಹಟ್ಟಿ: ತಾಲೂಕಿನ ಪ್ರತಿ ಗ್ರಾಪಂನಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ತರಬೇತಿ ಪಡೆದ ಆರೈಕೆದಾರರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಪಟ್ಟಣದ ತಾಪಂ ಸಭಾ ಭವನದಲ್ಲಿ ತಾಲೂಕಿನ ಗ್ರಾಮೀಣ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಏರ್ಪಡಿಸಿದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಆ.15 ರಂದು ಪ್ರತಿ ಗ್ರಾಪಂ.ಗೆ ಒಂದರಂತೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅಲ್ಲಿ ದಾಖಲಾಗುವ ಮಕ್ಕಳಿಗೆ ಸರಿಯಾದ ಪಾಲನೆ, ಪೋಷಣೆ ಮಾಡುವ ಮೂಲಕ ಯಾವುದೇ ಲೋಪದೋಷಗಳು ಬರದಂತೆ ಮಕ್ಕಳ ಆರೈಕೆ ಮಾಡುವ ಗುರುತರ ಹೊಣೆ ತಮ್ಮ ಮೇಲಿದ್ದು. ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ತಾಪಂ ಇಒ ಡಾ.ಎನ್.ಎಚ್. ಓಲೇಕಾರ ಮಾತನಾಡಿ, ಶಿಶುಪಾಲನೆಯಲ್ಲಿ ಆರೈಕೆದಾರರ ಪಾತ್ರ ಮಹತ್ವದ್ದಾಗಿದ್ದು, ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಮಾತನಾಡಿದರು. ತರಬೇತಿಯ ಮಾಸ್ಟರ್ ಟ್ರೇನರ್ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಲಲಿತಾ ಅಳವಂಡಿ, ಮೇಲ್ವಿಚಾರಕಿ ಆರ್.ಆರ್. ಕರ್ಜಗಿ, 19 ಗ್ರಾಪಂ.ಗಳ ಆರೈಕೆದಾರರು, ತಾಲೂಕು ಐಇಸಿ ಸಂಯೋಜಕ ಮಂಜುನಾಥ ಎಸ್, ನರೇಗಾ ಸಹಾಯಕ ನಿರ್ದೇಶಕ ಮಡಿವಾಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net