

ಹಿರಿಯೂರು: ಅಧಿಕಾರ ವಿಕೇಂದ್ರೀಕರಣದ ಮೂಲ ಆಶಯ ಹಳ್ಳಿ ಜನರ ಕೈಗೆ ಅಧಿಕಾರ ಕೊಟ್ಟು, ಅವರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯ ಮಾಡಿಸುವುದಾಗಿದೆ ಎಂದು ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಆದಿವಾಲದ ಆದಿಜಾಂಬ ಕೋಡಿಹಳ್ಳಿ ಮಠದ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಹಳ್ಳಿಗಳ ಗ್ರಾಪಂ ಸದಸ್ಯರ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾರತಮ್ಯ ಮತ್ತು ಸೇಡಿನ ರಾಜಕಾರಣ ಹಳ್ಳಿಗಳಿಗೆ ಪ್ರವೇಶಿಸದಂತೆ ಸೌಹಾರ್ದದ ಬೇಲಿ ಹಾಕಬೇಕು. ನಾವೆಲ್ಲರೂ ಒಂದು, ನಮ್ಮೂರು ನಾಡಿನಲ್ಲಿಯೇ ಮುಂದು ಎಂಬ ಘೋಷಣೆಯೊಂದಿಗೆ ಒಗ್ಗಟ್ಟಿನ ಹೆಜ್ಜೆ ಹಾಕಬೇಕು ಎಂದರು.
ರಾಜಕಾರಣ ಚುನಾವಣೆ ಸಂದರ್ಭದ ಹತ್ತು-ಇಪ್ಪತ್ತು ದಿನಕ್ಕೆ ಮಾತ್ರ ಸೀಮಿತವಾಗಿರಬೇಕು. ಬಳಿಕ ಸೋತವರು-ಗೆದ್ದವರು ಹಾಗೂ ಗ್ರಾಮಸ್ಥರು ಎಲ್ಲರೂ ಹಳ್ಳಿಯ ಶ್ರೇಯೋಭಿವೃದ್ಧಿ ಕಡೆ ಗಮನಹರಿಸಬೇಕು. ಅದಕ್ಕಾಗಿ ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದರು.
ಶಾಸಕ, ಸಂಸದರು, ಜಿಪಂ ಅಧ್ಯಕ್ಷರು ಸೇರಿ ವಿವಿಧ ಕ್ಷೇತ್ರದ ಜನಪ್ರತಿನಿಧಿಗೆ ಇಲ್ಲದ ಪರಮಾಧಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇರುತ್ತದೆ. ಅನುದಾನ ಹಂಚಿಕೆ ಸೇರಿ ವಿವಿಧ ರೀತಿ ಕೋಟ್ಯಂತರ ಹಣ ಹಳ್ಳಿಗಳಿಗೆ ಹರಿದುಬರಲಿದೆ. ಇವುಗಳನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡುವ ಜ್ಞಾನ ಬೆಳೆಸಿಕೊಳ್ಳಬೇಕು. ಜತೆಗೆ ಹೆಚ್ಚು-ಹೆಚ್ಚು ಅನುದಾನ ತರಲು ಗ್ರಾಮದ ಜನರೆಲ್ಲರೂ ಚಿಂತನೆ ನಡೆಸಬೇಕು ಎಂದು ಹೇಳಿದರು.
ಗ್ರಾಪಂ ಸಾಮಾನ್ಯ ಸಭೆಯಂತೆ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ಪ್ರತಿ ತಿಂಗಳು ಸಭೆ ಆಯೋಜಿಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಏನು ಕೆಲಸ ಆಗಬೇಕಿದೆ, ಬಡವರು, ಅಶಕ್ತರಿಗೆ ಸರ್ಕಾರಿ ಸೌಲಭ್ಯ ಹೇಗೆ ದೊರಕಿಸಬಹುದು, ಹಳ್ಳಿಗಳಲ್ಲಿ ಮೂಲ ಸೌಕರ್ಯ ಕಾರ್ಯ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಿ, ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು. ಸಿಕ್ಕ ಅಧಿಕಾರವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಈ ರೀತಿ ಜನಪಯೋಗಿ ಕಾರ್ಯಕ್ಕೆ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಯಾರೂ ಹಳ್ಳಿ ರಾಜಕಾರಣದಲ್ಲಿ ಉತ್ತಮ ಆಡಳಿತ ನೀಡುತ್ತಾರೆ, ಅವರು ಮುಂದೊಂದು ದಿನ ದೆಹಲಿ ಗದ್ದುಗೆ ಏರುವ ಸಾಧ್ಯತೆ ಇರುತ್ತದೆ. ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸೇರಿ ಅನೇಕ ನಾಯಕರ ರಾಜಕೀಯ ಜೀವನವೇ ಸಾಕ್ಷಿ ಎಂದರು.
ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಕುಬೇರಪ್ಪ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್, ಸದಸ್ಯರಾದ ಪಿ.ದೊರೆಸ್ವಾಮಿ, ಆರ್.ಕಿರಣ್ ಪಟ್ರೆಹಳ್ಳಿ, ಸೈಯದ್ ಮುನೀರ್ ಹಾಗೂ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.