

ಬ್ಯಾಡಗಿ: ಪರಿಶಿಷ್ಟ ಪಂಗಡದ ಹೆಸರಲ್ಲಿ ಪ್ರವರ್ಗ-1 ಕೆಲವರು ಖೊಟ್ಟಿ ಜಾತಿ ಪ್ರಮಾಣಪತ್ರ ಪಡೆಯುವುದನ್ನು ತಡೆಗಟ್ಟುವುದು ಹಾಗೂ ಅನ್ಯ ಸಮುದಾಯವನ್ನು ಎಸ್ಟಿ ಸೇರಿಸಬಾರದು ಎಂದು ಆಗ್ರಹಿಸಿ ತಾಲೂಕು ವಾಲ್ಮೀಕಿ ಸಮುದಾಯದವರು ಪಟ್ಟಣದ ಮುಖ್ಯರಸ್ತೆ ಮೂಲಕ ತಹಸೀಲ್ದಾರ್ ಕಾರ್ಯಾಲಯದವರೆಗೂ ತೆರಳಿ ಗುರುವಾರ ಪ್ರತಿಭಟನೆ ನಡೆಸಿದರು.
ನಿವೃತ್ತ ಪ್ರಾಂಶುಪಾಲ ಶಿವಾನಂದ ಯಮನಕ್ಕನವರ ಮಾತನಾಡಿ, ಉತ್ತರ ಕರ್ನಾಟಕದ ಪ್ರವರ್ಗ 1ಕ್ಕೆ ಸೇರಿದ ಕೋಳಿ, ಕಬ್ಬಲಿಗ, ಬೆಸ್ತ, ಕಬ್ಬಲಿಗ, ಅಂಬಿಗ ಸಮುದಾಯದವರು ತಳವಾರ, ನಾಯಕ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಇದನ್ನು ಕೂಡಲೇ ತಡೆಗಟ್ಟಬೇಕು. ತಹಸೀಲ್ದಾರರು ಇಂತಹ ಸುಳ್ಳು ಜಾತಿ ಪ್ರಮಾಣಪತ್ರ ನೀಡಲು ಮುಂದಾಗದಂತೆ ಸರ್ಕಾರ ಹಾಗೂ ಗೆಜೆಟ್ ನಿಯಮ ಪಾಲಿಸಬೇಕು ಎಂದು ಆಗ್ರಹಿಸಿದರು.
ಈಗ ಎಸ್ಟಿ ಜನಾಂಗದ ಮೀಸಲಾತಿ ಸೌಲಭ್ಯ ಪಡೆಯಲು ರಾಜ್ಯದ ಕೆಲ ಅನ್ಯ ಸಮುದಾಯದವರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದು, ಈ ಕುರಿತು ಸಾಕಷ್ಟು ಪ್ರತಿಕ್ರಿಯೆ ನಡೆಸಿದ್ದಾರೆ. ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ದಕ್ಕೆ ಬರಲಿದ್ದು, ಇಂತಹ ಯಾವುದೇ ಹೊಸದಾಗಿ ಜಾತಿಗಳನ್ನು ಸೇರಿಸಲು ಸರ್ಕಾರ ಮುಂದಾಗಬಾರದು. ಒಂದು ವೇಳೆ ಇಂತಹ ಕಾರ್ಯಕ್ಕೆ ಅವಕಾಶ ನೀಡಿದಲ್ಲಿ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಸಮುದಾಯದವರ ಮೇಲೆ ಜರುಗುವ ದೌರ್ಜನ್ಯ ತಡೆಗಟ್ಟುವುದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸೌಲಭ್ಯಗಳನ್ನು ತಕ್ಷಣ ಬಿಡುಗಡೆಗೊಳಿಸುವುದು, ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯಗಳ ಕಟ್ಟಡಗಳನ್ನು ಪೂರ್ಣಗೊಳಿಸುವುದು, ವಾಲ್ಮೀಕಿ ಅಧ್ಯಯನ ಪೀಠ ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ತಹಸೀಲ್ದಾರ್ ಚಂದ್ರಶೇಖರ ನಾಯಕ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಹೊನ್ನೂರಪ್ಪ ಕಾಡಸಾಲಿ, ವಕೀಲ ಶಿವಪ್ಪ ಅಂಬಲಿ, ಮಲ್ಲೇಶಪ್ಪ ಒಳಗೊಂಡಿ, ಹನುಮಂತಪ್ಪ ಕುರಕುಂದಿ, ಶಿವರಾಮ ಹೊನ್ನಾಳಿ, ಹನುಮಂತಪ್ಪ ಬೈರಾಪುರ ಇತರರಿದ್ದರು.