ಪಿಎಫ್‌ಐ, ಎಸ್‌ಡಿಪಿಐ ಮಾತು ಕೇಳ್ಬೇಡಿ

samavesha
Published on

ಮಂಗಳೂರು: ಪಿಎಫ್‌ಐ, ಎಸ್‌ಡಿಪಿಐಯವರ ಮಾತು ಕೇಳಬೇಡಿ. ಅವರು ಬಿಜೆಪಿ ಬೆಂಬಲಿಗರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಮನವಿ ಮಾಡಿಕೊಂಡರು.

ಪುರಭವನದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಮತ್ತು ಭಾವೈಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಎಸ್‌ಡಿಪಿಐ, ಪಿಎಫ್‌ಐ ಪಾತ್ರವಿರುವುದಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆರಂಭಂ ದಲೂ ಹೇಳುತ್ತಿದ್ದಾರೆ. ಸರ್ಕಾರದ ಬಳಿ ಸಾಕ್ಷಿ ಇದ್ದರೆ ಆ ಸಂಘಟನೆಗಳನ್ನು ನಿರ್ಬಂಧಿಸಲಿ. ಗೋಹತ್ಯೆ ನಿಷೇಧ ಕಾಯ್ದೆಯಿಂದ ಬಡ ರೈತರಿಗೆ ತೊಂದರೆಯಾಗುತ್ತದೆ. ಸರ್ಕಾರಕ್ಕೆ ಗೋವುಗಳ ಬಗ್ಗೆ ಕಾಳಜಿ ಇದ್ದರೆ ಗೋವು ಮಾಂಸ ರಫ್ತು ಮತ್ತು ಆಮದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಕರಾವಳಿ ಜಿಲ್ಲೆಗಳ ಜನರು ಇತ್ತೀಚಿನ ವರ್ಷಗಳ ತನಕವೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದರು. ರಾಜಕೀಯ ಸ್ವಾರ್ಥಕ್ಕಾಗಿ ಈ ಪ್ರದೇಶವನ್ನು ಕೋಮುವಾದದ ಪ್ರಯೋಗಾಲಯವಾಗಿ ಮಾರ್ಪಡಿಸುವ ಪ್ರಯತ್ನ ಇಲ್ಲಿ ನಡೆದಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ, ಅಲ್ಪಸಂಖ್ಯಾತರಿಗೆ ಇರುವ ಶೇ.4 ಮೀಸಲಾತಿ ರದ್ದು ಬಗ್ಗೆ ಬಿಜೆಪಿ ಶಾಸಕರು ಮಾತನಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಸರ್ಕಾರ ಮುಂದುವರಿದರೆ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸಲಿದೆ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ಸಯ್ಯದ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರ ಪದಗ್ರಹಣ ನಡೆಯಿತು. ರಾಜ್ಯಸಭಾ ಸದಸ್ಯ ನಾಸಿರ್ ಹುಸೈನ್, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಸಂತ ಬಂಗೇರ, ಯು.ಟಿಖಾದರ್, ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊದಿನ್ ಬಾವ, ಯುವ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಲುಕ್ಮನ್ ಬಂಟ್ವಾಳ್, ಮಾಜಿ ಅಧ್ಯಕ್ಷ ಮಿಥುನ್ ರೈ, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಅಲ್ಪಸಂಖ್ಯಾತರ ಘಟಕದ ನಿಕಟಪೂರ್ವ ಅಧ್ಯಕ್ಷ ಎನ್.ಎಸ್.ಕರೀಂ, ಮುಖಂಡರಾದ ಮಂಜುನಾಥ ಭಂಡಾರಿ, ಇಬ್ರಾಹಿಂ ಕೋಡಿಜಾಲ್, ಮಮತಾಗಟ್ಟಿ, ವಿಶ್ವಾಸ್ ಕುಮಾರ್‌ದಾಸ್, ಶಶಿಧರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಎಲ್ಲರ ಮಾತಿನಲ್ಲೂ ಒಂದೇ ಧ್ವನಿ: ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾವೇಶದಲ್ಲಿ ಭಾಗವಹಿಸಿದ ರಾಜ್ಯಸಭಾ ಸದಸ್ಯ ನಾಸಿರ್ ಹುಸೈನ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಯು.ಟಿ.ಖಾದರ್ ಸಹಿತ ಪ್ರಮುಖ ನಾಯಕರು ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬೆಳೆಯಲು ಅವಕಾಶ ನೀಡಿದರೆ ಬಿಜೆಪಿ ಪರಿವಾರ ಸಂಘಟನೆಗಳು ಬೆಳೆಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net