

ಬಾಳೆಹೊನ್ನೂರು: ಮಲೆನಾಡಿನಲ್ಲಿ ಒತ್ತುವರಿ, ಕಸ್ತೂರಿ ರಂಗನ್ ವರದಿಯಂಥ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯಕವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಭಾನುವಾರ ಆಯೋಜಿಸಿದ್ದ ಮಲೆನಾಡಿಗರ ಸಮಸ್ಯೆ ಕುರಿತ ಮಲೆನಾಡಿಗರ ಮಹತ್ವದ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಲೆನಾಡಿನ ಜನರಿಗೆ ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವಿನ ವಿಚಾರವಾಗಿ ತಿಳಿವಳಿಕೆಗಳು ಇಲ್ಲದಿರುವುದೇ ಆತಂಕಗಳಿಗೆ ಕಾರಣ. ಇದರೊಂದಿಗೆ ವರದಿಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಲ್ಲಿ ಸರ್ಕಾರಗಳು ಹಿಂದುಳಿದಿರುವುದೂ ಕಾರಣ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮಲೆನಾಡು-ಕರಾವಳಿ ಒಕ್ಕೂಟ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸಭೆ ರೂಪಿಸಿರುವುದು ಪೂರಕವಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲ ಶಾಸಕರು ಜನಹಿತಕ್ಕಾಗಿ ಹೋರಾಟ ಮಾಡಿದರೆ ಅದಕ್ಕೆ ಯಶಸ್ಸು ದೊರಕಲಿದೆ. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲುಪಿ ಪರಿಣಾಮ ಬೀರಬೇಕು ಎಂದರು.
ಮಲೆನಾಡಿನ ಸಣ್ಣ ಕುಟುಂಬಗಳು ಜೀವನೋಪಾಯಕ್ಕಾಗಿ 1-2 ಎಕರೆ ಭೂಮಿ ಒತ್ತುವರಿ ಮಾಡಿವೆ. ಇಂಥ ಒತ್ತುವರಿ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕು. ಶಾಸಕರು ಸಹ ಜನರ ದನಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ರಂಭಾಪುರಿ ಪೀಠವು ಜಾತಿ, ಮತ, ಪಂಥದ ಭೇದ ಮರೆತು ಸದಾಶಯದೊಂದಿಗೆ ಮುನ್ನಡೆಯುತ್ತಿದೆ. ಸಮಾಜದಲ್ಲಿ ಜಾತಿ, ಮತದ ಸಂಘರ್ಷಗಳು ಅತಿಯಾಗಿ ನಡೆಯುತ್ತಿದ್ದು, ಇಂಥ ಸಂದರ್ಭದಲ್ಲಿ ಮಠ, ಮಂದಿರಗಳು ಗಟ್ಟಿ ಧ್ವನಿಯಾಗಿ ಅದರ ವಿರುದ್ಧ ನಿಲ್ಲಬೇಕಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಸುರಕ್ಷಿತವಾಗಿರಬೇಕು ಎಂಬ ಉದ್ದೇಶ ಹೊಂದಿರುವುದು ಒಳ್ಳೆಯ ನಿರ್ಧಾರವಾಗಿದ್ದರೂ ಸಾಮಾನ್ಯ ಜನರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬುದನ್ನು ಅರಿಯಬೇಕಿದೆ. ಇಲ್ಲಿನ ಸಮಸ್ಯೆಗಳ ವಾಸ್ತವವನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಿದೆ. ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯಗಳು ಅಗತ್ಯವಾಗಿದೆ. ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಸಂದರ್ಭಕ್ಕನುಸಾರವಾಗಿ ರಂಭಾಪುರಿ ಪೀಠವು ಮಲೆನಾಡಿನ ಹೋರಾಟಗಾರರಿಗೆ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು.
ರೈತ ಎಂದಿಗೂ ಹಸಿರನ್ನು ನಾಶ ಮಾಡಿಲ್ಲ. ಪ್ರಕೃತಿ ವಿಕೋಪದಂಥ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಪ್ರಕೃತಿ ಬಗ್ಗೆ ಸಂಪದ್ಭರಿತ ವಿಚಾರವನ್ನು ಇಟ್ಟುಕೊಂಡವನು ರೈತ. ಮೇಘಸ್ಫೋಟಗಳು ಹೊಸತೇನಲ್ಲ. ಪ್ರಕೃತಿಯಲ್ಲಿ ಏರುಪೇರುಗಳು ಸಹಜವಾದದ್ದು. ಮಲೆನಾಡಿಗರ ಹೋರಾಟದ ಇತಿಹಾಸವನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ರೈತರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಭೆ ತಿಳಿಸಿದರು.
ಕರಾವಳಿ-ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಕ್ಷೇತ್ರ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎನ್.ನಾಗೇಶ್, ಪ್ರಮುಖರಾದ ಸಿ.ಎಲ್.ಮನೋಹರ್, ಎಂ.ಎಸ್.ಚನ್ನಕೇಶವ್, ಸುಧೀರ್‌ಕುಮಾರ್ ಮುರೊಳ್ಳಿ, ಕೆ.ಎಸ್.ರವೀಂದ್ರ, ಕೆ.ಎಲ್.ಅಶೋಕ್, ರಾಧಾ ಸುಂದ್ರೇಶ್, ಎಂ.ಎಸ್.ಅರುಣೇಶ್, ದಿಗಂತ್ ಬಿಂಬೈಲು, ಜಗದೀಶ್ ಕಣದಮನೆ, ಎಂ.ಕೆ.ಸುಂದರೇಶ್ ಇತರರಿದ್ದರು.