ಅಧಿಕಾರಿಗಳು ಒತ್ತಡಕ್ಕೆ ಮಣಿಯದಿರಿ

ಹುಣಸೂರು ನಗರದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.
Published on

ಹುಣಸೂರು: ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಲವಿಲ ಒದ್ದಾಡಿಕೊಂಡೇ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವ ಸರ್ಕಾರ ಇರುತ್ತದೋ ತಿಳಿಯದು. ಅಧಿಕಾರಿಗಳು ಅದರಲ್ಲೂ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಒತ್ತಡಕ್ಕೆ ಮಣಿಯದೇ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಎಚ್ಚರಿಸಿದರು.

ನಗರದ ಕನಕಭವನದಲ್ಲಿ ಮಂಗಳವಾರ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದ ಪರಿಣಾಮ ಕಾನೂನು ಉಲ್ಲಂಘಿಸಿ ಹಲವು ಕೆಲಸ ನಡೆದಿದ್ದು, ಈ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಪ್ರತಿಭಟನೆ ನಡೆಯಲಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸದೆ ಆಡಳಿತ ನಡೆಸಿ ಪ್ರತಿಯೊಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಆದರೆ ಇತ್ತೀಚಿನ ದಿನದಲ್ಲಿ ಕ್ಷೇತ್ರದಲ್ಲಿ ಸಹಕಾರ ಸಂಘ ನೊಂದಣಿ ಮಾಡಿಸುವುದೇ ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕಾರ ಸಂಘ ನಿಯಮಾನುಸಾರ ಎಲ್ಲಾ ದಾಖಲೆ ಇದ್ದರೂ ಸ್ಥಳಿಯ ಸಹಕಾರಿ ಸಂಘಗಳ ನೋಂದಣಿ ಅಧಿಕಾರಿ ನೋಂದಣಿ ಪ್ರಕ್ರಿಯೆಗೆ ಕೊಕ್ಕೆ ಹಾಕಿ ಪೆಂಡಿಂಗ್ ಇಡುವ ವಾತಾವರಣ ನಿರ್ಮಿಸಿದ್ದಾರೆ. ಈ ಎಲ್ಲವೂ ರಾಜಕಾರಣಿಯ ಒತ್ತಡದಿಂದ ನಡೆದಿದೆ ಎನ್ನುವ ಮಾಹಿತಿ ಇದ್ದು, ರಾಜಕೀಯ ಪಕ್ಷ 5 ವರ್ಷ ಅಧಿಕಾರದಲ್ಲಿದ್ದು ಹೋಗುತ್ತವೆ. ಆದರೆ ಸಹಕಾರ ಸಂಘ ಶಾಶ್ವತ. ಭವಿಷ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತದೋ ತಿಳಿಯದು, ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಎಚ್ಚರಿಸಿದರು.

ಡಿಸಿಸಿಗೆ ಮರುಜೀವ: ಡಿಸಿಸಿ ಬ್ಯಾಂಕ್ ಬಾಗಿಲು ಮುಚ್ಚುವ ಹಂತದಲ್ಲಿ ಅದರ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಸುಮಾರು 370 ಕೋಟಿ ಠೇವಣಿಯಿಂದ 1 ಸಾವಿರ ಕೋಟಿ ರೂ. ಠೇವಣಿ ಹಾಗೂ 600 ಕೋಟಿ ರೂ.ನಿಂದ 1600 ಕೋಟಿ ರೂ. ಸಾಲ ನೀಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇನೆ. ಈಗ ಪರಿಸ್ಥಿತಿ ಮತ್ತೊಮ್ಮೆ ಅಧಃಪತನದತ್ತ ಸಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಇದೇ ವೇಳೆ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ದಾಖಲೆ ಪ್ರಮಾಣದ ಹಾಲು ಉತ್ಪತ್ತಿ ಮತ್ತು ಸಾಲ ವಸೂಲಿ ಮಾಡಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಂ.ಎಫ್. ನಿರ್ದೇಶಕ ಕೆ.ಎಸ್.ಕುಮಾರ್, ತೆಂಗು ನಾರಿನ ಸಹಕಾರಿ ಸಂಘದ ನಿರ್ದೇಶಕ ಮಹದೇವಸ್ವಾಮಿ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಶರವಣ, ಹಾಪ್ ಕಾಮ್ಸ್ ನಿರ್ದೇಶಕ ಸೂರ್ಯಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೇಮಂತ್ ಕುಮಾರ್,ಉಪಾಧ್ಯಕ್ಷ ರೇವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ಇತರರು ಉಪಸ್ಥಿತರಿದ್ದರು.

ಹಣ ಲೂಟಿ ಮಾಡಿದವರಿಗೆ ಆಯಕಟ್ಟಿನ ಜಾಗ : ಡಿಸಿಸಿ ಬ್ಯಾಂಕ್ ಹಗರಣ ಎಲ್ಲರಿಗೂ ತಿಳಿದ ವಿಷಯ. ಈ ಪ್ರಕರಣದಲ್ಲಿ ಹಣ ಲೂಟಿ ಮಾಡಿದವರನ್ನು ಮತ್ತೆ ಅದೇ ಸ್ಥಳಕ್ಕೆ ನಿಯೋಜಿಸಿದ್ದು, ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಗರಣದಲ್ಲಿ ಕೊಳ್ಳೆ ಹೊಡೆದವರನ್ನು ತನಿಖೆಯಿಂದ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರಿಗೆ ನೋಟಿಸ್ ಜಾರಿಗೊಳಿಸಿ ತನಿಖೆ ನಡೆಸುತ್ತಿರುವುದು ದುರಂತ. ಇಂತಹವರಿಂದ ಸಹಕಾರ ಕ್ಷೇತ್ರ ಉಳಿಯಲು ಸಾಧ್ಯವೇ ಎಂದು ರಾಜ್ಯ ಸರ್ಕಾರವನ್ನು ಶಾಸಕ ಹರೀಶ್ ಗೌಡ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net