

ಮೈಸೂರು: ಚುನಾವಣೆಯ ಹೊಸ್ತಿಲಲ್ಲಿ ಜಾತಿ, ಮತ, ಸ್ವಜನ ಪಕ್ಷಪಾತ ಕಂಡುಬರುತ್ತಿದ್ದು, ದಯಮಾಡಿ ಅಂತಹವರಿಗೆ ಮಣೆ ಹಾಕಬೇಡಿ ಎಂದು ಶಾಸಕ ಎಸ್.ಎ.ರಾಮದಾಸ್ ಮನವಿ ಮಾಡಿದರು.
ನಗರದ ಜೆಎಲ್ಬಿ ರಸ್ತೆಯ ಆರಾಧ್ಯ ಮಹಾಸಭಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಡ್ ನಂ. 55ರ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ವಾರ್ಡ್ ಮಟ್ಟದ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ಕೆಲವೇ ದಿನಗಳು ಇರುವ ಸಂದರ್ಭದಲ್ಲಿ ಕೆಲವರು ಜಾತಿ ಹಾಗೂ ಧರ್ಮವನ್ನು ಮುನ್ನಲೆಗೆ ತಂದಿದ್ದಾರೆ. ಆದರೆ, ನಾನು ಅದೆಲ್ಲವನ್ನು ಮೀರಿ ಆಲೋಚಿಸುವವನು. ನಾನು ಹುಟ್ಟುವಾಗ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿರಲಿಲ್ಲ. ಕೆಲವರು ಅವಕಾಶದ ದುರುಪಯೋಗಕ್ಕಾಗಿ ಹವಣಿಸುತ್ತಿದ್ದಾರೆ. ಅವರಿಗೆ ಮತದ ಮೂಲಕವೇ ಉತ್ತರ ಕೊಡಿ ಎಂದು ಕರೆ ನೀಡಿದರು.
ಜಾತಿ ಇಟ್ಟುಕೊಂಡೇ ಕೆಲವರು ನಿತ್ಯ ವ್ಯವಹಾರದಲ್ಲಿ ತೊಡಗಿದ್ದು, ಅದರಂತಹ ಕೆಟ್ಟ ರಾಜಕಾರಣ ಮತ್ತೊಂದಿಲ್ಲ. ವ್ಯಕ್ತಿ ನೋಡಿ ಮತ ನೀಡಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರ ಭ್ರಷ್ಟಾಚಾರ ಮುಕ್ತ ಕ್ಷೇತ್ರವೆಂಬ ಖ್ಯಾತಿ ಪಡೆಯಲಿದೆ. ಅದನ್ನು ಕ್ಷೇತ್ರದ ಮತದಾರರು ಸಾಕ್ಷೀಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
1994ರಿಂದ ಈವರೆಗೆ ನಾನು ಕ್ಷೇತ್ರದಲ್ಲಿ ಹಣ, ಹೆಂಡ ಹಂಚಿಲ್ಲ. ನಿಮ್ಮೆಲ್ಲರ ವಿಶ್ವಾಸದಿಂದ ಆಯ್ಕೆಯಾಗುತ್ತಾ ಬಂದಿದ್ದೇನೆ. ನಿಮ್ಮ ಋಣ ನನ್ನ ಮೇಲಿದೆ. ಅದನ್ನು ಕಾಯಾ, ವಾಚಾ, ಮನಸಾ ತೀರಿಸುತ್ತಲೂ ಬಂದಿದ್ದೇನೆ. ಇದೀಗ ಮತ್ತೆ ಚುನಾವಣೆ ಎದುರಾಗಿದ್ದು, ಯಾವುದೇ ರೀತಿಯ ಖರ್ಚಿಲ್ಲದೆ ಈ ಚುನಾವಣೆ ನಡೆಸುವ ಮೂಲಕ ಹೊಸ ಭಾಷ್ಯ ಬರೆಯೋಣ ಎಂದರು.
ಹಣ, ಹೆಂಡ ಹಂಚಿ ಚುನಾವಣೆ ಮಾಡಬೇಡ ಎಂದು ನಮ್ಮ ಅಮ್ಮ ನನಗೆ ತಿಳಿ ಹೇಳಿದ್ದರು. ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ತತ್ವಾದರ್ಶಗಳನ್ನು ಇಟ್ಟುಕೊಂಡು ರಾಜಕೀಯ ಬದುಕು ನಡೆಸಿದ್ದೇನೆ. ಆ ಬಗ್ಗೆ ಮೈಸೂರಿನ ಜನರಿಂದ ರಾಷ್ಟ್ರವ್ಯಾಪಿ ನಾಯಕರಿಗೂ ತಿಳಿದಿದೆ. ಅದು ಹಲವಾರು ದೊಡ್ಡ ವೇದಿಕೆಯಲ್ಲಿ ಚರ್ಚೆ ಆಗಿದೆ. ಅದು ನನ್ನೊಬ್ಬನಿಗೆ ಸಂದ ಗೌರವ ಅಲ್ಲ, ಇಡೀ ಕೃಷ್ಣರಾಜ ಕ್ಷೇತ್ರಕ್ಕೆ ಸಂದ ಗೌರವ ಎಂದರು.
10 ರೂ. ನೀಡಿ: ನಾನು ನಿಮ್ಮ ಮನೆಯ ಮಗ, ನಿಮ್ಮ ಸಹೋದರ, ಆದಕಾರಣ ಒಂದು ಸಹಾಯ ಮಾಡಿ. ಪ್ರತಿ ಮನೆಯಿಂದ ಕೇವಲ 10 ರೂ.ಗಳನ್ನು ನಿಮ್ಮ ಮನೆಯಲ್ಲಿರುವ ಭಗವಂತನ ಮುಂದಿಟ್ಟು ಪೂಜಿಸಿ ಕೊಡಿ. ಅದು ಈ ಚುನಾವಣೆಗೆ ಠೇವಣಿ ಹಣವಾಗಲಿದೆ, ಅಷ್ಟು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಈ ಕ್ಷೇತ್ರಕ್ಕೆ ನಾವ್ಯಾರೂ ಶಾಶ್ವತ ಅಲ್ಲ. ಆದರೆ, ಕ್ಷೇತ್ರ ಮಾದರಿಯಾಗಿ ಇರಬೇಕು. ಒಬ್ಬ ಸಾಮಾನ್ಯ ಕಾರ್ಯಕರ್ತ ಈ ಕ್ಷೇತ್ರದ ಶಾಸಕನಾಗಬೇಕು. ಆದರೆ, ದುರ್ದೈವದ ಸಂಗತಿ ಎಂದರೆ ಇಂದು ಹಣ ಇರುವವರಿಗೆ ಮಾತ್ರ ಚುನಾವಣೆ ಎಂಬಂತಾಗಿದೆ. ಅದು ಕೃಷ್ಣರಾಜ ಕ್ಷೇತ್ರದ ಮಟ್ಟಿಗೆ ದೂರವಾಗಬೇಕು ಎಂದು ಸೂಚ್ಯವಾಗಿ ತಿಳಿಸಿದರು.
19 ಹಕ್ಕುಪತ್ರ ವಿತರಣೆ: ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲೇಬೇಕು ಎಂಬ ಮಹಾಸಂಕಲ್ಪದೊಂದಿಗೆ ಪ್ರಧಾನಮಂತ್ರಿ ಆವಾಜ್ ಯೋಜನೆಯನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜಾರಿ ಮಾಡಲಾಗಿದ್ದು, ಭಾಗಶಃ ಜನರಿಗೆ ಮನೆ ನೀಡಲಾಗಿದೆ. ಇನ್ನುಳಿದ 6 ಸಾವಿರ ಜನರಿಗೆ ಇದೇ ಮಾ.19 ರಂದು ಹಕ್ಕುಪತ್ರ ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪಕ್ಷದ ಮುಖಂಡರಾದ ಗೀತಾ, ಭಾಗ್ಯ, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.