

ಹುಬ್ಬಳ್ಳಿ: ಮಕ್ಕಳಿಗೆ ಜಂಕ್ ಫುಡ್ಗಳು ಆಕರ್ಷಿಸುತ್ತವೆ. ನಮ್ಮ ಆಹಾರ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಆರೋಗ್ಯ ವೃದ್ಧಿಯಾಗುತ್ತದೆ. ಜಂಕ್ ಫುಡ್ ತಿನ್ನುವುದರಿಂದ ಆರೋಗ್ಯ ಏರುಪೇರಾಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ ಡಾ. ನಿಶಾ ಗಲಗಲಿ ಅಭಿಪ್ರಾಯಪಟ್ಟರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಧಾರವಾಡ ಮಹಿಳಾ ಘಟಕದ ಆಶ್ರಯದಲ್ಲಿ ಧಾರವಾಡದ ಜೆಎಸ್ಎಸ್ ಉತ್ಸವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಬಗ್ಗೆ ತಿಳಿವಳಿಕೆ, ಪೌಷ್ಟಿಕ ಆಹಾರ ಪದ್ಧತಿ ಅಳವಡಿಕೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಆಹಾರ ಪದ್ಧತಿ ಬದಲಾದಂತೆ ಆರೋಗ್ಯದಲ್ಲಿ ಏರಿಳಿತ ಸಹಜ. ಸಮಸ್ಥಿತಿ ಕಾಯ್ದುಕೊಳ್ಳಲು ನಿಯಮಿತ ನಿದ್ರೆ, ಪೌಷ್ಟಿಕ ಆಹಾರ ಸೇವನೆ ಇರಬೇಕು. ಒತ್ತಡವು ವಿದ್ಯಾರ್ಥಿಗಳಿಗೂ ಬಿಟ್ಟಿಲ್ಲ. ಹಾಗಂತ ನಾವು ಅನಾರೋಗ್ಯಕ್ಕೆ ಒಳಗಾಗಬಾರದು ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಜ್ಯೋತಿ ಹಿರೇಮಠ ಮಾತನಾಡಿ, ಪರಿಸರದ ಜತೆಗೆ ಬದುಕುವ ವಿದ್ಯಾರ್ಥಿನಿಯರು ಮುಟ್ಟಿನ ಬಗ್ಗೆ ಕೀಳು ಅಭಿಪ್ರಾಯ ಹೊಂದಬಾರದು. ಹಾಗಂತ ಮೂಢನಂಬಿಕೆಗೂ ಒಳಗಾಗಬಾರದು. ತಿಳಿವಳಿಕೆಯಿಂದ ನಿಯಮ ಪಾಲನೆ ಮಾಡಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಐಎಂಎ ಧಾರವಾಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಮಾತನಾಡಿ, ಜೀವ-ಜೀವನದ ಪಾಠ ಎಲ್ಲರೂ ಕಲಿಯಬೇಕು. ಶಿಸ್ತು, ಸಂಯಮ, ಶ್ರದ್ಧೆ, ಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು. ಜತೆಗೆ ಓದಿನತ್ತಲೂ ಚಿತ್ತವಿರಬೇಕು ಎಂದರು.
ನಂತರ ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಎಲುಬು ಮತ್ತು ಕೀಲು ತಜ್ಞ ಡಾ. ನವೀನ ಮಂಕಣಿ ನೇತೃತ್ವದಲ್ಲಿ ಶಿಕ್ಷಕರ ಬೋನ್ ಮಿನರಲ್ ಡೆನ್ಸಿಟಿ (ಬಿಎಂಡಿ), ಮಧುಮೇಹ, ರಕ್ತದೊತ್ತಡ, ಹಿಮೋಗ್ಲೋಬಿನ್ ತಪಾಸಣೆ ಜರುಗಿತು. ಒಟ್ಟು 250ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಜೆಎಸ್ಎಸ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಐಟಿಐ ಕಾಲೇಜ್ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಉಪ ಪ್ರಾಚಾರ್ಯು ಡಾ. ಸುಕನ್ಯಾ, ಐಎಂಎ ಧಾರವಾಡ ಶಾಖೆ ಅಧ್ಯಕ್ಷ ಡಾ. ಸತೀಶ ಇರಕಲ್, ಮಹಿಳಾ ಶಾಖೆ ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ, ಡಾ. ಶರಾಯು ತಾವರಗೇರೆ, ಡಾ. ವಿಜಯ ನಾಡಕರ್ಣಿ, ಡಾ. ಸಿದ್ದಗಂಗಾ, ಇತರರು ಇದ್ದರು.