ಗ್ಯಾರಂಟಿ ಸವಲತ್ತು ತಲುಪಿಸುವಲ್ಲಿ ಲೋಪ ಆಗದಿರಲಿ

5ark-3
ಅರಕಲಗೂಡಿನಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಕಬ್ಬಳಿಗೆರೆ ಸೋಮಶೇಖರ್ ಅವರನ್ನು ಅಧ್ಯಕ್ಷ ಎಚ್.ಪಿ.ಶ್ರೀಧರ್‌ಗೌಡ ಸನ್ಮಾನಿಸಿದರು. ತಾಪಂ ಇಒ ಪ್ರಕಾಶ್, ಗ್ರೇಡ್- 2 ತಹಸೀಲ್ದಾರ್ ಮಲ್ಲಿಕಾರ್ಜುನ್ ಇದ್ದರು.
Published on

ಅರಕಲಗೂಡು: ಗ್ಯಾರಂಟಿ ಯೋಜನೆಯಡಿ ಸರ್ಕಾರ ಒದಗಿಸುತ್ತಿರುವ ಎಲ್ಲ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಲೋಪವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಪಿ.ಶ್ರೀಧರ್‌ಗೌಡ ಹೇಳಿದರು.


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ.92ರಷ್ಟು ಅನುಷ್ಠಾನವಾಗಿರುವುದು ಹರ್ಷದಾಯಕ ಸಂಗತಿ. ಸಮಿತಿ ಸದಸ್ಯರು ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.


ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಪಣತೊಟ್ಟು ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಗೊಳಿಸುತ್ತಿದೆ. ಪ್ರತಿ ತಿಂಗಳಿಗೆ ಅಂದಾಜು 10 ಕೋಟಿ ರೂ. ವಿನಿಯೋಗ ಮಾಡಲಾಗುತ್ತಿದೆ. ಇದುವರೆಗೆ 113 ಕೋಟಿ ರೂ. ಫಲಾನುಭವಿಗಳಿಗೆ ಪ್ರಯೋಜವಾಗಿದೆ. ಈ ಯೋಜನೆ ವ್ಯಾಪ್ತಿಗೆ ತಾಲೂಕಿನಲ್ಲಿ 54 ಸಾವಿರದಲ್ಲಿ 51 ಸಾವಿರ ಮಹಿಳೆಯರು ಪ್ರತಿ ತಿಂಗಳು ತಲಾ 2 ಸಾವಿರ ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎಂದು ಹೇಳಿದರು.


ಸಿಡಿಪಿಒ ವೆಂಕಟೇಶ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಉಳಿದಿರುವ ಬಾಕಿ ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ಯೋಜನೆ ಪ್ರಯೋಜನ ತಲುಪಿಸಿ ಶೇ. 100ರಷ್ಟು ಗುರಿ ಸಾಧನೆ ಮಾಡುವುದಾಗಿ ತಿಳಿಸಿದರು.


ಆಹಾರ ನಿರೀಕ್ಷಕ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 53 ಸಾವಿರ ಅನ್ನಭಾಗ್ಯ ಫಲಾನುಭವಿಗಳಿದ್ದು 50,320 ಜನರಿಗೆ ಯೋಜನೆಯ ಲಾಭ ದೊರೆಯುತ್ತಿದೆ. ಬಾಕಿ 3 ಸಾವಿರ ಜನರ ದಾಖಲೆಗಳಲ್ಲಿ ಲೋಪ ಕಂಡು ಬಂದಿದ್ದು, ಇದನ್ನೂ ಈ ತಿಂಗಳ ಅಂತ್ಯದೊಳಗೆ ಬಗೆಹರಿಸಲಾಗುವುದು ಎಂದರು.


ಅರಕಲಗೂಡು ಹಾಗೂ ರಾಮನಾಥಪುರ ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಚಿನ್ನಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 55 ಸಾವಿರ ಜನರು ಮನೆ ಬಳಕೆಯ ವಿದ್ಯುತ್ ಸಂಪರ್ಕವನ್ನು ಹೊಂದಿದ್ದು, ಈ ಪೈಕಿ 54ಸಾವಿರ ಜನರಿಗೆ ಗೃಹಜ್ಯೋತಿ ಪ್ರಯೋಜನ ದೊರೆತಿದೆ. ಶೇ.99ರಷ್ಟು ಗುರಿ ಹೊಂದಲಾಗಿದೆ. ಬಾಕಿ 614 ಜನರು ದಾಖಲೆಗಳನ್ನು ಸರಿಪಡಿಸಿಕೊಂಡರೆ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಹನುಮಂತಪ್ಪ ಮಾತನಾಡಿ, ಅರಕಲಗೂಡು ಘಟಕದಲ್ಲಿ 69 ಲಕ್ಷ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಮಾಸಿಕ 1.61 ಕೋಟಿ ರೂ. ನಿಗದಿಯಾಗಿದೆ. ಒಟ್ಟು 29 ಕೋಟಿ ರೂ. ಹಣ ನಿಗದಿಯಾಗಿದೆ. ಅದೇ ರೀತಿ ರಾಮನಾಥಪುರ ಘಟಕದಿಂದ 71 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಾಸಿಕ 2 ಕೋಟಿ ರೂ.ಆಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಗ್ರೇಡ್- 2 ತಹಸೀಲ್ದಾರ್ ಮಲ್ಲಿಕಾರ್ಜುನ್ ಇದ್ದರು. ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net