

ಕೋಲಾರ: ಜಿಲ್ಲಾದ್ಯಂತ ಮುಂಗಾರು ಮಳೆ ಸಾಧಾರಣವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ವಿವಿಧ ಇಲಾಖೆ ಅಧಿಖಾರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನ ಋತುಮಾನ ಪರಿಸ್ಥಿತಿ ಅನುಸಾರ ಜಿಲ್ಲೆಯಲ್ಲಿ ಎನ್ಡಿಆರ್ಎ್ ಪ್ರಕಾರ ಪರಿಹಾರ ವಿತರಣೆ ಮಾಡಬೇಕು. ಮನೆ ಹಾನಿ ಪ್ರಕರಣಗಳನ್ನು ತಂತ್ರಾಂಶದಲ್ಲಿ ಇಂಡೀಕರಣ, ಬೆಳೆನಷ್ಟ ಜಂಟಿ ಸಮೀಕ್ಷೆ ಕಡ್ಡಾಯ ಮಾಡಬೇಕು ಎಂದರು.
ಮಳೆಯಿಂದ ಜಿಲ್ಲೆಯ ಜನ ಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ತಹಸೀಲ್ದಾರಗಳು ತಮ್ಮ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಟಾಸ್ಕ್ೋರ್ಸ್ ಸಭೆ ನಡೆಸಿ ಸಮಸ್ಯೆಗಳು ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿನ ಅಧಿಕಾರಿಗಳು ರಾಜಕಾಲುವೆಗಳ ಹಾಗೂ ಚರಂಡಿಗಳಲ್ಲಿನ ತ್ಯಾಜ್ಯ ತೆರವುಗೊಳಿಸಬೇಕು. ಖಾಸಗಿ ಖಾಲಿ ಜಾಗಗಳ ಸ್ವಚ್ಛತೆಗೊಳಿಸಲು ಸಂಬಂಧಿಸಿದ ಮಾಲೀಕರಿಗೆ ಸೂಚನೆ ನೀಡಬೇಕು. ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಳೆ ಪ್ರಮಾಣ ಅಧಿಕವಾದಲ್ಲಿ ಸಾಂಕ್ರಾಮಿಕ ರೋಗಗಳು ಎದುರಾಗಬಹುದು. ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ನಿತ್ಯ ಕುಡಿಯಲು ಬಳಸುವ ನೀರನ್ನು ಕುದಿಸಿ, ಆರಿಸಿ ಕುಡಿಯಲು ಉಪಯೋಗಿಸುವಂತೆ ಅರಿವು ಮೂಡಿಸಬೇಕು. ಸಾರ್ವಜನಿಕರ ದೂರುಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅತಿವೃಷ್ಟಿ ನಿರ್ವಹಣೆಗೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳಬೇಕು. ನುರಿತ ಈಜುಗಾರರನ್ನು ಗುರುತಿಸಿಟ್ಟುಕೊಂಡು ಸಂದರ್ಭಕ್ಕನುಸಾರ ಸಾರ್ವಜನಿಕರ ಸಂರಕ್ಷಣೆಗೆ ಆದ್ಯತೆ ನೀಡಲು ತಿಳಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಆರ್.ಸುಮಾ ಇತರರಿದ್ದರು.