

ಬೆಂಗಳೂರು: ನಗರದ ರಸ್ತೆಗಳ ಬದಿ ಫುಟ್‌ಪಾತ್‌ಅನ್ನು ಪೂರ್ಣವಾಗಿ ಅತಿಕ್ರಮಿಸಿ ಯಾವುದೇ ಬೀದಿಬದಿ ವ್ಯಾಪಾರಿಗಳು ಹಾಗೂ ಇತರ ಮಳಿಗೆಯವರು ವ್ಯಾಪಾರ ಮಾಡುವಂತಿಲ್ಲ. ಒಂದು ವೇಳೆ ಪಾದಚಾರಿಗಳಿಗೆ ತೊಂದರೆ ಆಗುವ ರೀತಿ ಫುಟ್‌ಪಾತ್ ಪೂರ್ತಿ ವಹಿವಾಟಿಗೆ ಬಳಸಿಕೊಂಡಲ್ಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ದಕ್ಷಿಣ ವಲಯದ ಅಧಿಕಾರಿಗಳೊಂದಿಗೆ ಕೆಲ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದ ವೇಳೆ ಅಲ್ಲಿ ಒತ್ತುವರಿಗೆ ಒಳಗಾಗಿದ್ದ ಭಾಗಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು.
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಪಾದಚಾರಿ ಮಾರ್ಗಗಳಲ್ಲಿ ನಡೆದಾಡಲು ತೊಂದರೆಯಾಗುತ್ತಿದೆ ಎಂಬುದಾಗಿ ಪದೇ ಪದೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಯಾ ವಲಯ ಆಯುಕ್ತರಿಗೆ ಸೂಚಿಲಾಗಿದೆ. ಫುಟ್‌ಪಾತ್‌ಅನ್ನು ಪೂರ್ಣವಾಗಿ ಅತಿಕ್ರಮಿಸಿ ವ್ಯಾಪಾರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.ಜತೆಗೆ ಶಾಶ್ವತ ಚೌಕಟ್ಟು ನಿರ್ಮಿಸಿಕೊಂಡಿದ್ದಲ್ಲಿ ಅವುಗಳನ್ನೂ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪರವಾನಗಿ ಅಮಾನತಿಗೆ ಸೂಚನೆ:
ಪರಿಶೀಲನೆ ವೇಳೆ ಭಾರತ್ ಟಿವಿಎಸ್ ಸಂಸ್ಥೆ ಪಾದಚಾರಿ ಮಾರ್ಗವನ್ನು ಪೂರ್ಣವಾಗಿ ಒತ್ತುವರಿ ಮಾಡಿಕೊಂಡು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡಿರುವುದು ದೃಢಪಟ್ಟಿತು. ಇದನ್ನು ಗಮನಿಸಿದ ಮುಖ್ಯ ಆಯುಕ್ತರು ಸಂಬಂಧಪಟ್ಟವರಿಗೆ ದಂಡ ವಿಧಿಸುವುದರ ಜತೆಗೆ ಉದ್ದಿಮೆ ಪರವಾನಗಿಯನ್ನೂ ಅಮಾನತುಗೊಳಿಸಲು ಸೂಚಿಸಿದರು.
ಎಲ್ಲೆಲ್ಲಿ ಪಾದಚಾರಿ ಮಾರ್ಗದ ಕರ್ಬ್ಸ್ ಹಾಳಾಗಿದ್ದು, ಅವುಗಳನ್ನು ಕೂಡಲೆ ಬದಲಿಸಲು ಸೂಚಿಸಿದರು. ಯಡಿಯೂರು ವಾರ್ಡ್ 16ನೇ ಕ್ರಾಸ್‌ನ ಯೆಸ್ ಬ್ಯಾಂಕ್ ಬಳಿ ಬೆಸ್ಕಾಂ ಅಳವಡಿಸಿರುವ ವಿದ್ಯುತ್ ಪರಿವರ್ತಕದ ಕೇಬಲ್ಗಳು ಚರಂಡಿಗೆ ಅಡ್ಡವಾಗಿದ್ದು, ಮಣ್ಣಿನ ರಾಶಿ ರಸ್ತೆಯಲ್ಲೇ ಇರುವುದನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪರಿಶೀಲನೆ ವೇಳೆ ಪಾಲಿಕೆಯ ದಕ್ಷಿಣ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಇದ್ದರು.
ಶಾಪಿಂಗ್ ಕಾಂಪ್ಲೆಕ್ಸ್ ಬಳಿ ತೆರವಿಗೆ ಸೂಚನೆ:
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಹೆಚ್ಚು ಒತ್ತುವರಿಗೆ ಒಳಗಾಗಿದೆ. ಹಿಂದೆ ಮಾರ್ಷಲ್‌ಗಳಿದ್ದ ವೇಳೆ ನಿಯಮಿತವಾಗಿ ತೆರವು ಕೈಗೊಳ್ಳಲಾಗುತ್ತಿತ್ತು. ಈಗ ಇಡೀ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.