

ಕುರುಗೋಡು: ಪಟ್ಟಣದಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸ್‌ಐ ಸುಪ್ರೀತ್ ಮತ್ತು ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆ ಹಾಗೂ ಮನೆ, ಚಿನ್ನಾಭರಣ ಕಳ್ಳತನ ಬಗ್ಗೆ ಎಚ್ಚರಿಕೆವಹಿಸಲು ಜಾಗೃತಿ ಮೂಡಿಸಿದರು.
ಹೆಲ್ಮೆಟ್ ಧರಿಸದೆ ಮತ್ತು ಮದ್ಯಪಾನ ಮಾಡಿ ಬೈಕ್ ಓಡಿಸದಂತೆ ಸವಾರರಿಗೆ ತಿಳಿಸಿದರು. ಜನದಟ್ಟಣೆಯಿಂದ ಕೂಡಿದ ರಥೋತ್ಸವ, ಹಬ್ಬ, ಉತ್ಸವ ಮತ್ತು ಬಸ್‌ಗಳಲ್ಲಿ ಸಂಚರಿಸುವಾಗ ಮತ್ತು ವಾಯುವಿಹಾರಕ್ಕೆ ತೆರಳುವಾಗ ಮಹಿಳೆಯರು ಚಿನ್ನಾಭರಣಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಹೆಚ್ಚು ಜನ ಸೇರುವ ಸ್ಥಳಗಳಿಗೆ ತೆರಳುವಾಗ ಬೆಲೆಬಾಳುವ ಆಭರಣಗಳನ್ನು ಧರಿಸದಂತೆ ಸಲಹೆ ನೀಡಿದರು.
ಮನೆಗಳಿಗೆ ಬೀಗ ಹಾಕಿ ಮಾಳಿಗೆಯ ಮೇಲೆ ಮಲಗುವುದು ಮತ್ತು ಹೆಚ್ಚು ದಿನ ಊರಿಗೆ ಹೋಗುವ ಸಂದರ್ಭ ಮನೆಯ ನೆರೆಹೊರೆಯವರು ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಮನೆ ಕಳ್ಳತನ ತಡೆಯಬಹುದು ಎಂದು ತಿಳಿಸಿದರು.