ಕೃಷಿ ಜಮೀನು ಖುಲ್ಲಾಗೊಳಿಸಬೇಡಿ

MDG tp
ಮೂಡಿಗೆರೆ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಇಒ ಡಾ. ಸಿ.ರಮೇಶ್ ಇದ್ದರು.
Published on

ಮೂಡಿಗೆರೆ: ಶ್ರೀಮಂತರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡರೆ ಸುಮ್ಮನಾಗುವ ಅರಣ್ಯ ಇಲಾಖೆ ಅಧಿಕಾರಿಗಳು ಬಡವರ ಒಂದೆರಡು ಎಕರೆ ಜಮೀನಿನಲ್ಲಿರುವ ಬೆಳೆ ನಾಶಪಡಿಸಿ ಜಾಗ ಖುಲ್ಲಾಗೊಳಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಬಡವರ ಜಮೀನು ಖುಲ್ಲಾಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ತಾಪಂನಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವ ವೇಳೆ ತಾರತಮ್ಯ ನೀತಿ ವಿರುದ್ಧ ಹರಿಹಾಯ್ದರು.
ಫಾರ್ಮ್ ನಂ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಅದೇ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಅಕ್ರಮ ಸಕ್ರಮ ಸಮಿತಿ ಇನ್ನೂ ರಚಿಸಿಲ್ಲ. ಸಮಿತಿ ರಚನೆಯಾದ ಬಳಿಕ ಫಲಾನುಭವಿಗಳಿಗೆ ಜಾಗ ಹಸ್ತಾಂತರಿಸಲಾಗುವುದು. ರೈತರಿಗೆ ಅಧಿಕಾರಿಗಳು ಕಿರುಕುಳ ನೀಡಬಾರದು ಎಂದು ತಾಕೀತು ಮಾಡಿದರು.
ಸರ್ಕಾರಿ ಕಟ್ಟಡ, ಹಾಸ್ಟೆಲ್, ಶಾಲೆ, ಪಶು ಆಸ್ಪತ್ರೆ, ಅಂಗನವಾಡಿ ಕಟ್ಟಡ ನಿರ್ಮಿಸಲು ಮುಂದಾದರೆ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ನಮ್ಮದೆಂದು ಅಡ್ಡಿಪಡಿಸುತ್ತಿದ್ದಾರೆ. ಕುಂದೂರು ಗ್ರಾಮದ ದುರ್ಗಮ ಅರಣ್ಯದಲ್ಲಿ ವಾಸಿಸುತ್ತಿರುವ 11 ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿ 3 ತಿಂಗಳು ಕಳೆದರೂ ಅಧಿಕಾರಿಗಳು ಮುಂದಾಗಿಲ್ಲ. ಕೂಡಲೆ ಅವರನ್ನು ಸುರಕ್ಷಿತ ಸ್ಥಳದಲ್ಲಿ ಸ್ಥಳಾಂತರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತಾಲೂಕಿನ ವಿವಿಧ ರಸ್ತೆಗಳು ಸಂಪೂರ್ಣ ಗುಂಡಿಯಾಗಿವೆ. ಎಲ್ಲ ರಸ್ತೆ ಕಾಮಗಾರಿ ಇನ್ನು 3 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಜನ್ನಾಪುರದಿಂದ ಕಿರುಗುಂದದವರೆಗೆ 6 ಕಿ.ಮೀ. ರಸ್ತೆ ಸಂಪೂರ್ಣ ಗುಂಡಿಯಾಗಿದೆ. ಪೊದೆಗಳು ರಸ್ತೆಗೆ ಚಾಚಿಕೊಂಡಿವೆ. ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಬೆಟ್ಟದಮನೆಯ ಹೇಮಾವತಿ ನದಿ ಸೇತುವೆ ಕಾಮಗಾರಿ ಆರಂಭಿಸಿ 6 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಪಿಡಬ್ಲುೃಡಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ ಕಾಮಗಾರಿ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಅಬಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೀನುಗಾರಿಕೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ತಾಪಂ ಇಒ ಡಾ. ಸಿ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net