

ಮೂಡಿಗೆರೆ: ಸರ್ಕಾರವೇ ನೀಡಿದ ಸಾಗುವಳಿ ಜಮೀನಿನ ದಾಖಲೆಗಳನ್ನು ಉಪವಿಭಾಗಾಕಾರಿಗಳ ಮಟ್ಟದಲ್ಲಿ ವಜಾಗೊಳಿಸಲಾಗುತ್ತಿದ್ದು, ಸರ್ಕಾರ ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೈತ ಹಿತರಕ್ಷಣಾ ವೇದಿಕೆ ಮುಖಂಡರು, ರೈತರು ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದರು.
1986ರಲ್ಲಿ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ರೈತರಿಗೆ ಾರ್ಮ್ ನಂ.50 ಮತ್ತು 53ರ ಅಡಿಯಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. ಭೂಮಿ ಮಂಜೂರು ಪ್ರಕ್ರಿಯೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಮಂಜೂರಾದ ದಾಖಲಾತಿಗಳನ್ನು ವಜಾಗೊಳಿಸಲಾಗುತ್ತಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ರೈತರ ಮೇಲೆ ಪ್ರಹಾರ ಮಾಡಲಾಗುತ್ತಿದೆ. ನಿಯಮ ಪ್ರಕಾರವೇ ರೈತರಿಂದ ಸರ್ಕಾರ ನಿಗದಿಪಡಿಸಿದ ಶುಲ್ಕ ಕಟ್ಟಿಸಿಕೊಂಡು ಭೂಮಿ ಮಂಜೂರು ಮಾಡಿಕೊಡಲಾಗಿದೆ. ಇದೀಗ ಅಧಿಕಾರಿಗಳು ವಜಾ ಪ್ರಕ್ರಿಯೆ ಕೈಗೊಂಡಿರುವುದರಿಂದ ರೈತರನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಜಮೀನು ಪಡೆದ ಅರ್ಜಿಯನ್ನು ವಜಾಗೊಳಿಸಿದರೆ ನಮ್ಮ ತಕರಾರಿಲ್ಲ. ಆದರೆ ಯಾವುದೇ ಆಸ್ತಿ ಇಲ್ಲದೇ ಅರ್ಹ ಲಾನುಭವಿಗಳ ಅರ್ಜಿ ವಜಾಗೊಳಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರನ್ನು ಹೊಣೆಯಾಗಿ ಅವರ ಜಮೀನು ಮಂಜೂರಾತಿ ವಜಾಗೊಳಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ ಕರೆದೊಯ್ದು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ವಜಾಗೊಂಡಿರುವ ಅರ್ಜಿ ಮರು ಪರಿಶೀಲನೆ ಸಾಧ್ಯವಿಲ್ಲ. ಈ ಹಿಂದೆ ಕಂದಾಯ ಇಲಾಖೆ ಮೂಲಕ ಮಂಜೂರಾಗಿದ್ದ ಜಮೀನಿನ ಬಗ್ಗೆ ಅರಣ್ಯ ಇಲಾಖೆ ಅಭಿಪ್ರಾಯ ಪಡೆದಿಲ್ಲ. ಇಂತಹ ನಾನಾ ಕಾರಣದಿಂದ ಅರ್ಜಿ ವಿಲೇಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಪರಿಶೀಲನೆ ನಡೆಯುತ್ತಿದೆ. ಸದ್ಯದಲ್ಲೇ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಅಂತ್ಯವಾಗಲಿದ್ದು, ಇದರಿಂದ ತಕ್ಕಮಟ್ಟಿಗೆ ಸಮಸ್ಯೆ ಬಗೆಹರಿಯಲಿದೆ ಎಂದರು.