

ಸರಗೂರು : ಸಮಾಜದಲ್ಲಿ ಈ ಹಿಂದೆ ಕ್ಷಯ ರೋಗಿಗಳನ್ನು ಬಹಿಷ್ಕರಿಸುವ ಮೂಢನಂಬಿಕೆಯಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನಾಗರಿಕ ಸಮಾಜ ಪ್ರಬುದ್ಧತೆಯಿಂದ ಚಿಂತಿಸಬೇಕು. ಕ್ಷಯ ರೋಗಿಗಳ ಬಗ್ಗೆ ಭೇದಭಾವ ಮಾಡಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಎಚ್.ಡಿ.ಕೋಟೆ ಮತ್ತು ಕೆಎಚ್‌ಪಿಟಿ ಸಂಸ್ಥೆ ವತಿಯಿಂದ ಕ್ಷಯ ರೋಗದಿಂದ ಗುಣಮುಖ ಹೊಂದಿರುವವರಿಗೆ ಕ್ಷಯ ರೋಗ ವಿಜೇತ ತರಬೇತಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕ್ಷಯಮುಕ್ತ ಗ್ರಾಮ ಹಾಗೂ ಕ್ಷಯ ಮುಕ್ತ ಪಂಚಾಯಿತಿಯನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದೇಶವಾಗಿದೆ. ಕ್ಷಯ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈ ಬಗ್ಗೆ ಸಮುದಾಯ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಕುಟುಂಬಸ್ಥರು ಕ್ಷಯ ರೋಗಿಯನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದರೆ ರೋಗ ಸಂಪೂರ್ಣವಾಗಿ ಗುಣಮುಖವಾಗುತ್ತದೆ. ಮುನ್ನೆಚ್ಚರಿಕೆ ವಹಿಸುವ ಮೂಲಕ ರೋಗ ಬೇರೊಬ್ಬರಿಗೆ ಹರಡದಂತೆ ತಡೆಯಬಹುದು ಎಂದು ಸಲಹೆ ನೀಡಿದರು. ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವ ಪ್ರತಿ ರೋಗಿಗೂ ಮಾಸಿಕ 500 ರೂ. ಗಳಂತೆ ಆರು ತಿಂಗಳು ಒಟ್ಟು 3 ಸಾವಿರ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 40 ಮಂದಿ ಕ್ಷಯರೋಗ ವಿಜೇತರು ಭಾಗವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ, ಕೆಎಚ್‌ಪಿಟಿ ರಾಜ್ಯ ಸಂಯೋಜಕ ಪ್ರಕಾಶ್, ಜಿಲ್ಲಾ ಸಂಯೋಜಕ ಪ್ರಕಾಶ್ ಪೂಜಾರಿ, ಮಹದೇವ್ , ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.