

ಜಯಪುರ: ಕಾಫಿ ಮತ್ತು ಟೀ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವಾರ್ಷಿಕ ವರಮಾನವನ್ನು ಸಮೀಕ್ಷೆ ವೇಳೆ ಪರಿಗಣಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಎಸ್ಟೇಟ್ ಲೇಬರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಟಿ.ಮಾಣಿಕ್ಯ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶೇ.95 ರಷ್ಟು ಕಾರ್ಮಿಕರು ಕಾಫಿ, ಟೀ ಎಸ್ಟೇಟ್‌ಗಳಲ್ಲಿರುವ ಮಾಲೀಕರ ಕೂಲಿ ಲೈನ್‌ನಲ್ಲಿ ವಾಸವಾಗಿದ್ದು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ತೋಟ ಕಾರ್ಮಿಕರ ದಿನದ ಸಂಬಳ ನಿಗದಿಯಾಗಿದ್ದರೂ, ಮಳೆಗಾಲದಲ್ಲಿ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಕೆಲಕ್ಕೆ ಹೋಗುವುದು ವಿರಳವಾಗುತ್ತದೆ. 60 ವರ್ಷ ತುಂಬಿದ ಕಾರ್ಮಿಕರನ್ನು ಎಸ್ಟೇಟ್ ಅಡಳಿತ ಮಂಡಳಿ ವಾಸವಿರುವ ಮನೆಯಿಂದ ತೆರವುಗೊಳಿಸಿ ಹೊರಹಾಕುತ್ತಾರೆ. ಕೊನೆಗಾಲದಲ್ಲಿ ಕಾರ್ಮಿಕರು ಸ್ವಂತ ಸೂರು ಇಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಯ ಆದಾಯ ಕಾಲಂನಲ್ಲಿ ತಿಂಗಳ ಆದಾಯ ಮತ್ತು ಖರ್ಚನ್ನು ನಮೂದಿಸಲು ತಿಳಿಸಲಾಗಿದೆ. ಕಾರ್ಮಿಕರು ತಿಂಗಳಲ್ಲಿ ಕೆಲವೇ ದಿನಗಳು ಮಾತ್ರ ಕೆಲಸ ಮಾಡುವುದರಿಂದ ಅವರ ದಿನದ ಸಂಬಳ ಆಧರಿಸಿ ತಿಂಗಳ ಆದಾಯವನ್ನು ನಿಖರವಾಗಿ ತಿಳಿಸಲು ಸಾಧ್ಯವಿರುವುದಿಲ್ಲ. ಕೆಲವು ಕಡೆಗಳಲ್ಲಿ ಒಂದು ಕುಟುಂಬದಿಂದ ಒಬ್ಬರೇ ಕೆಲಸ ಮಾಡುವವರಿದ್ದಾರೆ. ಸಮೀಕ್ಷೇಯ ಪ್ರಶ್ನಾವಳಿಯಲ್ಲಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವ ಜ್ಞಾನವನ್ನೂ ಅವರು ಹೊಂದಿಲ್ಲ. ಇದರಿಂದ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಲಿದ್ದಾರೆ. ಅದ್ದರಿಂದ ಟೀ, ಕಾಫಿ ಎಸ್ಟೇಟ್‌ಗಳಲ್ಲಿ ಸಮೀಕ್ಷೆ ನಡೆಸುವ ವೇಳೆ ಕಾರ್ಮಿಕರ ನೈಜ ಪರಿಸ್ಥಿತಿ ಅರ್ಥ ಮಾಡಿಕೊಂಡು ದಿನದ ಸಂಬಳ ಲೆಕ್ಕಹಾಕಿ, ವಾರ್ಷಿಕ ವರಮಾನ ನಿರ್ಧರಿಸದೆ ವಿನಾಯಿತಿ ನೀಡುವ ಮೂಲಕ ಬಿಪಿಎಲ್ ಕಾರ್ಡ್ ರದ್ದಾಗದಂತೆ ಮುಂದುವರೆಸಿಕೊಂಡು ಹೋಗಲು ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.