

ರಾಯಚೂರು: ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ರಾಮ ಮಂದಿರಕ್ಕೆ ಸಂಬಂಸಿದಂತೆ ಹಿಂದು, ಮುಸ್ಲಿಮರು ತೀರ್ಪಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ. ಮುಂದೆಯೂ ರಾಮ ಹೆಸರಿನಲ್ಲಿ ಪರಸ್ಪರ ಸಂಘರ್ಷಕ್ಕೆ ಹೋಗುವಂತಹ ಕೆಲಸ ಮಾಡಬಾರದು ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ರಾಚೋಟಿವೀರ ಶಿವಾಚಾರ್ಯ ಮಂಗಳ ಭವನ ಉದ್ಘಾಟನೆಗೆ ಆಗಮಿಸಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು 500 ವರ್ಷಗಳಿಂದ ಹಿಂದುಗಳು ಹೋರಾಟ ಮಾಡಿಕೊಂಡು ಬಂದಿದ್ದು, ಅದು ಈಗ ಸಾಕಾರವಾಗುತ್ತಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದು, ದೇಶದ ಎಲ್ಲರೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇಸ್ಲಾಂ ಧರ್ಮದ ಪ್ರಜ್ಞಾವಂತ, ದೂರದೃಷ್ಠಿ ಉಳ್ಳವರು ಕೂಡಾ ರಾಮ ಮಂದಿರ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಮಸ್ಲಿಮರು ಕೂಡಾ ತಮಗೆ ನೀಡಿದ ಜಾಗದಲ್ಲಿ ಭವ್ಯವಾದ ಮಸೀದಿಯನ್ನು ನಿರ್ಮಾಣ ಮಾಡಲಿ. ಇತ್ಯರ್ಥಗೊಂಡಿರುವ ಸಮಸ್ಯೆಯನ್ನು ಪುನಃ ಸಂಘರ್ಷಕ್ಕೀಡು ಮಾಡುವ ಕೆಲಸವಾಗಬಾರದು ಎನ್ನುವುದು ನಮ್ಮ ಆಶಯವಾಗಿದೆ.
ರಾಮಮಂದಿರ ಉದ್ಘಾಟನೆ ದಿನದಂದು ಸಾರ್ವತ್ರಿಕ ರಜೆ ಕೊಡಬೇಕು ಎನ್ನುವುದು ಬಹುಜನರ ಅಪೇಕ್ಷೆಯಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಕೆಲ ಪಕ್ಷಗಳ ಧ್ಯೇಯ, ಧೋರಣೆ ಹಾಗೂ ಪಕ್ಷದ ನಾಯಕ ಅಭಿಪ್ರಾಯಗಳು ಬೇರೆ ಬೇರೆಯಾಗಿರುವ ಕಾರಣ ರಜೆ ಕೊಟ್ಟಿರಲಿಕ್ಕಿಲ್ಲ.
ದೇಶದ ಬಹುತೇಕ ರಾಜ್ಯಗಳಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಹುಜನರ ಬೇಡಿಕೆಯನ್ನು ಈಡೇರಿಸದಿದ್ದರೆ ವಿರೋಗಳು ಅನ್ನುವ ಭಾವನೆ ಸಹಜವಾಗಿ ತಲೆದೋರುತ್ತಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಡಬಾರದು.
ಮಂದಿರ ಉದ್ಘಾಟನೆಗೆ ಎಲ್ಲ ಮಠಾೀಶರಿಗೂ ಆಹ್ವಾನ ಬಂದಿದೆ. ಆದರೆ ನಮ್ಮ ಕಾರ್ಯಕ್ರಮಗಳು ಪೂರ್ವನಿಗದಿಯಾಗಿದ್ದರಿಂದ ಉದ್ಘಾಟನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.