

ಧಾರವಾಡ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಮಾಜದ ಯಾವುದೇ ಮಗು ಸೌಲಭ್ಯ ವಂಚಿತವಾಗದಂತೆ ಜಾಗ್ರತೆ ವಹಿಸುವುದು ಮಗುವಿನ ಪಾಲಕರು, ಅಧಿಕಾರಿಗಳು ಸೇರಿ ಎಲ್ಲರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಬಾಸ್ಟಿಯನ್ ಅಂಥೋನಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬಾಲನ್ಯಾಯ ಕಾಯ್ದೆ-2015, ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಸಶಕ್ತೀಕರಣಕ್ಕೆ ಮತ್ತು ದೌರ್ಜನ್ಯಗಳಿಂದ ರಕ್ಷಿಸಲು ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮ ಹಾಗೂ ಶಾಲಾ ಮಟ್ಟದಲ್ಲಿ ಆಯೋಜಿಸಬೇಕು. ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಹಂತದ ಅಧಿಕಾರಿಗಳಿಗೆ ಸೂಕ್ತ ತರಬೇತಿ ಆಯೋಜಿಸಬೇಕು ಎಂದರು.
ಕಾರ್ವಿುಕ ಇಲಾಖೆ ಮೂಲಕ ಬಾಲ ಕಾರ್ವಿುಕರ ಸಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಇಲಾಖೆ ಅಧಿಕಾರಿಗಳು ಬಾಲ ಕಾರ್ವಿುಕ ಹಾಗೂ ಕಿಶೋರ ಕಾರ್ವಿುಕರ ಕುರಿತು ಮಾಹಿತಿ ಸಂಗ್ರಹಿಸಿ ಅವುಗಳ ನಿಮೂಲನೆಗೆ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಗೃಹ ಸೇರಿ ಎಲ್ಲ ಸೌಲಭ್ಯಗಳನ್ನು ಪೂರೈಸಬೇಕು ಎಂದರು.
ಮಕ್ಕಳಿಗೆ ಸರ್ಕಾರ ಹಾಗೂ ಕುಟುಂಬದ ಸೌಲಭ್ಯ, ಸೌಕರ್ಯ ಸಿಗುವಂತೆ ನೋಡಿಕೊಳ್ಳುವ ಹಾಗೂ ಮಗುವಿನ ಮೇಲೆ ದೌರ್ಜನ್ಯ ಆಗದಂತೆ ರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ಜಿಪಂ ಸಿಇಒ ಡಾ. ಸುಶೀಲಾ ಬಿ., ಉಪ ಪೊಲೀಸ್ ಆಯುಕ್ತ ಕೆ. ರಾಮರಾಜನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಚಿತ ಆಪ್ತ ಸಮಾಲೋಚನಾ ಸೇವೆ ಹಾಗೂ ಭಿಕ್ಷಾಟನೆ ನಿಷೇಧ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಆಯೋಗದ ಸದಸ್ಯರಾದ ಅಶೋಕ ಯರಗಟ್ಟಿ, ಪರಶುರಾಮ ಎಂ.ಎಲ್., ಭಾರತಿ ಎಸ್.ಡಬ್ಲೂ್ಯ., ಡಾ. ಜಯಶ್ರೀ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದಿನಕರ, ಡಿವೈಎಸ್ಪಿ ಎಂ.ಬಿ. ಸಂಕದ, ಡಿಡಿಪಿಐ ಎಂ.ಎಲ್. ಹಂಚಾಟೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುರುಷೋತ್ತಮ ಎನ್.ಆರ್. ಇತರರು ಇದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ.ಎಚ್.ಎಚ್. ಕುಕನೂರ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ ವಂದಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಾಲ್ಯ ವಿವಾಹದಿಂದ ಮಕ್ಕಳನ್ನು ರಕ್ಷಿಸಿ ಅವರ ಉತ್ತಮ ಭವಿಷ್ಯಕ್ಕೆ ಅಗತ್ಯವಿರುವ ಶಿಕ್ಷಣ ಹಾಗೂ ಇತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 31ಕ್ಕೂ ಹೆಚ್ಚು ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಅಪಾಯದಲ್ಲಿ ಸಿಲುಕಿದ ಮಕ್ಕಳಿಗೆ ರಕ್ಷಣೆ ನೀಡಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಅವುಗಳ ಪರವಾನಗಿ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.