

ಹೂವಿನಹಡಗಲಿ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ತಾಪಂ ಆವರಣದ ರಾಜೀವಗಾಂಧಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮುಂಜಾಗ್ರತ ಕ್ರಮವಾಗಿ ಶಾಂತಿ ಸಭೆ ನಡೆಸಲಾಗಿದೆ. ಹಬ್ಬದ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಾರಣರಾಗಬಾರದು ಎಂದರು.
ಸಿಪಿಐ ದೀಪಕ್ ಆರ್ ಬೂಸರೆಡ್ಡಿ ಮಾತನಾಡಿ, ಪಟ್ಟಣದ ಹನ್ನೊಂದು ಭಾಗಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ. ಎಲ್ಲೆಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಆ ಭಾಗದ ಸಂಘಟಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪಟ್ಟಣದ ಬಹುತೇಕ ಭಾಗಗಳಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ ಪುರಸಭೆ ಅಧಿಕಾರಿಗಳು ಆ ಭಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಿ. ವಿದ್ಯುತ್ ಅವಘಡಗಳು ಉಂಟಾದಲ್ಲಿ ಕೂಡಲೇ ಜೆಸ್ಕಾಂ ಅಧಿಕಾರಿಗಳು ಸ್ಥಳದಲ್ಲಿ ಇರುವಂತೆ ಸಿಬ್ಬಂದಿಗಳನ್ನು ನೇಮಿಸಬೇಕು ಎಂದರು.
ಇದನ್ನು ಓದಿ: ಈದ್ ಮಿಲಾದ್ ಕಲಬುರಗಿಯಲ್ಲಿ ಜೋರ್ದಾರ್ ಮೆರವಣಿಗೆ
ತಾಪಂ ಇಒ ಉಮೇಶ ಮೈನಹಳ್ಳಿ ಮಾತನಾಡಿ, ತಾಪಂನಿಂದ ತಾಲೂಕಿನ ನದಿ ತೀರದ ಪ್ರದೇಶ ಹಾಗೂ ಬಸ್‌ನಿಲ್ದಾಣದ ಮುಂಭಾಗದಲ್ಲಿನ ನಿವೇಶನ ಹಾಗೂ ನವಲಿ ರಸ್ತೆಯಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಸಮೀಪ ಗಣೇಶ ಮೂರ್ತಿ ವಿಸರ್ಜನೆಗೆ ಸ್ಥಳ ನಿಗದಿ ಮಾಡಲಾಗಿದೆ ಎಂದರು.