

ಶ್ರೀರಂಗಪಟ್ಟಣ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಗವದ್ ಧ್ವಜಗಳು ಹಾಗೂ ಬಂಟಿಂಗ್ಸ್ ಅಳವಡಿಸುವ ವಿಚಾರದಲ್ಲಿ ದಲಿತ ಸಂಘಟನೆಗಳು ಹಾಗೂ ಹಿಂದು ಸಂಘಟನೆಗಳ ನಡುವೆ ವಿವಾದ ಏರ್ಪಟ್ಟಿದ್ದ ಕಾರಣ ಗುರುವಾರ ಸಂಜೆ ವಿವಾದಿತ ಸ್ಥಳಕ್ಕೆ ಐಜಿಪಿ, ಎಸ್ಪಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸದ್ಯಕ್ಕೆ ಎಲ್ಲ ಚಟುವಟಿಕೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.
ಅಧಿಕಾರಿಗಳು ಭೇಟಿ ನೀಡುವುದಕ್ಕೂ ಮೊದಲು ಗುರುವಾರ ಮಧ್ಯಾಹ್ನ ವಿವಾದವನ್ನು ಶಮನಗೊಳಿಸಲು ತಾಲೂಕು ಆಡಳಿತ ಸಭೆ ಕರೆದಿತ್ತು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ ಅವರ ನೇತೃತ್ವದಲ್ಲಿ ಪುರಸಭೆ ಸದಸ್ಯರು ನಡೆಸಿದ ಸೌರ್ಹದ ಸಭೆಯಲ್ಲಿ ಎರಡೂ ಬಣದ ಕಾರ್ಯಕರ್ತರು ಕೆಲ ಷರತ್ತುಗಳು ಮತ್ತು ಆಡಳಿತದ ನಿಯಮಗಳನ್ನು ಪಾಲಿಸಲು ಒಮ್ಮತದಿಂದ ಸಮ್ಮತಿ ಸೂಚಿಸಿದ್ದವು.
ಹನುಮ ಜಯಂತಿ ಪ್ರಯುಕ್ತ ಡಿ.15ರಂದು ಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು ಭಾಗಿಯಾಗುವ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಇದಕ್ಕಾಗಿ ಗಂಜಾಂನಿಂದ ಶ್ರೀರಂಗಪಟ್ಟಣದವರೆಗೂ ಕೇಸರಿ ಬಣ್ಣದ ಬಂಟಿಂಗ್ಸ್, ಭಗವದ್ ಧ್ವಜಗಳು ಹಾಗೂ ಹನುಮನ ವಿವಿಧ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಆದರೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇವುಗಳಿಗೆ ಅವಕಾಶ ನೀಡಬಾರದು ಎಂದು ವಿವಿಧ ದಸಂಸ ಸಂಘಟನೆ ಮತ್ತು ಅಂಬೇಡ್ಕರ್ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿದ್ದವು.
ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್ ಮತ್ತು ಎಸ್.ಪ್ರಕಾಶ್ ಹಾಗೂ ಎರಡೂ ಸಂಘಟನೆಗಳ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.