ಜಮೀನಿಗೆ ಹೋಗುವ ರಸ್ತೆ ಬಂದ್ ಬೇಡ

20-09-Shiva-2
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರೈತರ ಜಮೀನಿಗೆ ಹೋಗುವ ರಸ್ತೆ ಬಂದ್ ಮಾಡಿರುವುದನ್ನು ಖಂಡಿಸಿ ರಾಯಚೂರು ತಾಲೂಕಿನ ಚಿಕ್ಕಸುಗೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಕಾರಿಗಳಾದ ಬೂದಯ್ಯಸ್ವಾಮಿ, ಲಿಂಗಾರೆಡ್ಡಿ, ಬಸವರಾಜ ಪಾಟೀಲ್, ಗೋವಿಂದಪ್ಪ ನಾಯಕ, ಸಿದ್ದಯ್ಯಸ್ವಾಮಿ, ದೇವರಾಜ ನಾಯಕ, ಶಂಕ್ರಪ್ಪಗೌಡ, ತಿಮ್ಮಣ್ಣ ನಾಯಕ ಇದ್ದರು.
Published on

ರಾಯಚೂರು: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಹಾದು ಹೋಗುತ್ತಿರುವ ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಬಂದ್ ಮಾಡಿರುವುದನ್ನು ಖಂಡಿಸಿ ತಾಲೂಕಿನ ಚಿಕ್ಕಸುಗೂರು ಬಳಿಯ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಿದರು.
ಸೂರತ್-ಚೆನ್ನೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಅಶೋಕ್ ಬುಲ್ಡಿಕಾನ್ ಲಿಮಿಟೆಡ್ ಮತ್ತು ಭಾರತ್ ವಾಣಿಜ್ಯ ಈಸ್ಟರ್ನ್ ಲಿಮಿಟೆಡ್ ಸಂಸ್ಥೆ ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ಹೋಗುವ ರಸ್ತೆ ಬಂದ್ ಮಾಡಿದ್ದರಿಂದ ರೈತರು ಜಮೀನಿಗೆ ಹೋಗಲು ತೊಂದರೆ ಅನುಭವಿಸುವಂತಾಗಿದೆ.
ಮುಂಗಾರು ಬಿತ್ತನೆ ಮಾಡಬೇಕಾದ ರೈತರು ಗುತ್ತಿಗೆದಾರರ ದಬ್ಬಾಳಿಕೆಯಿಂದ ಕೈಕಟ್ಟಿ ಕುಳಿತಿದ್ದಾರೆ. ಹೆದ್ದಾರಿ ಹಾದು ಮಾರ್ಗದಲ್ಲಿ ಕೆಲವೆಡೆ ಅಂಡರ್‌ಪಾಸ್ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಅಂಡರ್‌ಪಾಸ್ ಎರಡು ಬದಿಯಲ್ಲಿ ರಸ್ತೆ ನಿರ್ಮಾಣ ಮಾಡದೆ ಒಂದೆಡೆ ರಸ್ತೆ ಮಾಡಿ ಮತ್ತೊಂದೆಡೆ ಕಂಪೌಂಡ್ ನಿರ್ಮಾಣ ಮಾಡಲಾಗಿದೆ.
ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಅಂಡರ್‌ಪಾಸ್ ಎರಡು ಬದಿಯಲ್ಲಿ ರಸ್ತೆ ಮಾಡಬೇಕು. ರೈತರು ತಮ್ಮ ಜಮೀನಿಗೆ ಹೋಗುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಕಾರಿಗಳಾದ ಬೂದಯ್ಯಸ್ವಾಮಿ, ಲಿಂಗಾರೆಡ್ಡಿ, ಬಸವರಾಜ ಪಾಟೀಲ್, ಗೋವಿಂದಪ್ಪ ನಾಯಕ, ಸಿದ್ದಯ್ಯಸ್ವಾಮಿ, ದೇವರಾಜ ನಾಯಕ, ಶಂಕ್ರಪ್ಪಗೌಡ, ತಿಮ್ಮಣ್ಣ ನಾಯಕ ಹಾಗೂ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net