

ಎನ್.ಆರ್.ಪುರ: ಮಾದಕ ವ್ಯಸನಕ್ಕೆ ಯಾರೂ ದಾಸರಾಗಬಾರದು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಹೇಳಿದರು.
ಬುಧವಾರ ಪಟ್ಟಣದ ಪುಷ್ಪಾ ನರ್ಸಿಂಗ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಪುಷ್ಪಾ ನಸಿರ್ಂಗ್ ಕಾಲೇಜು ಆಶ್ರಯದಲ್ಲಿ ನಡೆದ ಮಾದಕ ವ್ಯಸನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹದಿಹರೆಯದವರು ಮಾದಕ ವಸ್ತುಗಳಿಂದ ದೂರವಿರಬೇಕು. ಮಾದಕ ವಸ್ತು ಸಾಗಣೆ ಮಾಡುವುದು ಬಳಸುವುದು ಕಾನೂನಿನಲ್ಲಿ ಅಪರಾಧ. ಮಾದಕ ವಸ್ತುಗಳಿಗೆ ಬಲಿಯಾದವರು ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ಈ ರೀತಿಯ ಉತ್ತಮ ಕಾರ್ಯಕ್ರಮಗಳು ನಡೆಯುವುದರಿಂದ ಸ್ವಾಸ್ಥ್ಯ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ವಕೀಲ ವಿದ್ವತ್‌ಗೌಡ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ಮಂಜುಳಾ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಬಗ್ಗೆ ಮಾಹಿತಿ ನೀಡಿದರು. ಡಾ.ಮೇರಿಸುಸನ್ನ, ಸಿಸ್ಟರ್‌ಜಯ, ನೋಯಲ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಕ್ಷಯ ರೋಗ ಮೇಲ್ವಿಚಾರಕ ಪವನ್ಕರ್ ಇದ್ದರು.