ಕಳ್ಳರ ಬಗ್ಗೆ ಭಯ ಬೇಡ, ಜಾಗ್ರತೆ ಇರಲಿ

Do not be afraid of thieves, be careful
ಬಲ್ಲಪ್ಪ ನಂದಗಾವಿ
Published on

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳ್ಳರು ಬರುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಭಯ ಬೇಡ ಆದರೆ ಜಾಗ್ರತೆ ಇರಲಿ ಎಂದು ಬಸವನಬಾಗೇವಾಡಿ ಡಿವೈಎಸ್​ಪಿ ಬಲ್ಲಪ್ಪ ನಂದಗಾವಿ ಹೇಳಿದರು.

ಪಟ್ಟಣದ ಪೊಲೀಸ್​ ಠಾಣೆ ಆವರಣದಲ್ಲಿ ಸೋಮವಾರ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ವಿವಿಧ ಗಲ್ಲಿಗಳಲ್ಲಿ ರಾತ್ರಿ ಕಳ್ಳರು ದೊಣ್ಣೆ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ಕಳ್ಳತನ ಮಾಡುತ್ತಿದ್ದಾರೆಂದು, ಪಟ್ಟಣದ ಹಲವು ಗಲ್ಲಿಗಳು ಹಾಗೂ ಬಡಾವಣೆಗಳಲ್ಲಿ ಕಳ್ಳರು ಬರುತ್ತಾರೆ ಎಂದು ಪಟ್ಟಣದ ಕೆಲ ಬಡಾವಣೆಯಲ್ಲಿ ಕೆಲವರು ರಾತ್ರಿ ಕಾವಲು ಮಾಡುತ್ತಿರುವುದರಿಂದ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಭಯ ಬೇಡ, ಜಾಗ್ರತೆ ಇರಲಿ, ಈ ನಿಟ್ಟಿನಲ್ಲಿ ಆಯಾ ಗಲ್ಲಿಗಳ ಹಿರಿಯರು ಯುವಕರಿಗೆ ತಿಳಿ ಹೇಳಬೇಕು ಎಂದು ಹೇಳಿದರು.

ಕಳ್ಳರು ಬರುತ್ತಾರೆಂದು ಗಾಳಿ ಸುದ್ದಿ ಹರಡಿ ಭಯದ ವಾತಾವರಣ ನಿರ್ಮಾಣ ಮಾಡಬಾರದು. ಸಂಶಯಾಸ್ಪದವಾಗಿ ಅಪರಿಚಿತರು ಮನೆ ಸುತ್ತಮುತ್ತ ಸುಳಿಯುತ್ತಿದ್ದರೆ ತಣ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ರಾತ್ರಿ 10 ಗಂಟೆ ನಂತರ ಔಷಧ ಅಂಗಡಿ ಹಾಗೂ ಹಾಲಿನ ಅಂಗಡಿ ಹೊರತು ಪಡಿಸಿ ಉಳಿದ ಅಂಗಡಿಗಳು ತೆರೆಯಬಾರದು. ಯುವಕರು ರಾತ್ರಿ ಮದ್ಯ ಸೇವಿಸಿ ಅಲೆದಾಡುವುದು ಸರಿಯಲ್ಲ. ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್​ ಇನ್ಸ್​ಪೆಕ್ಟರ್​ (ಪಿ.ಐ) ಗುರುಶಾಂತ ದಾಶ್ಯಾಳ ಮಾತನಾಡಿ, ಮನೆಗೆ ಸಿ.ಸಿ ಕ್ಯಾಮರಾ ಅಳವಡಿಸಬೇಕು. ಮನೆ ಸೇರಿ ಸುತ್ತ ಮುತ್ತ ವಿಶಾಲವಾಗಿ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಅಕ್ಕಪಕ್ಕದವರ ಮನೆಯವರಿಗೆ ನಿಮ್ಮ ಮೊಬೈಲ್​ ಸಂಖ್ಯೆ ಕೊಡಬೇಕು ಎಂದು ಹೇಳಿದರು.

ಹಗಲು ರಾತ್ರಿ ಜನರ ರಣೆಗಾಗಿ ಪೊಲೀಸರು ಕಾರ್ಯ ನಿರ್ವಹಿಸುತಿದ್ದಾರೆ. ಅವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕುಡಿದು ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೇಗವಾಗಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಬಾರದು. ಚಾರಿ ನಿಯಮ ಪಾಲಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ, ಪಟ್ಟಣದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸುಸಜ್ಜಿತ ಸಿ.ಸಿ ಕ್ಯಾಮರಾ ಅಳವಡಿಸಿದರೆ ಅಪರಾಧ ಪ್ರಕರಣಗಳನ್ನು ತಡೆಯಲು ಸಹಕಾರಿಯಾಗಲಿದೆ. ರಾತ್ರಿ 11ರ ನಂತರ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಲೆದಾಡುವವರ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net