ಕೆಆರ್‌ಎಸ್ ಸುತ್ತ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಲ್ಲ: ರೈತ ಸಂಘ ಎಚ್ಚರಿಕೆ

Published on

ಮೈಸೂರು: ಕೆಆರ್‌ಎಸ್ ಜಲಾಶಯ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಮಾಡುವ ಪ್ರಯತ್ನ ಮತ್ತೆ ನಡೆಯುತ್ತಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಹೈಕೋರ್ಟ್ ಸಹ ಗಣಿಗಾರಿಕೆಗಿಂತ ಜಲಾಶಯ ಮುಖ್ಯ ಎಂದು ಹೇಳಿದೆ. ಆದರೆ, ವೈಜ್ಞಾನಿಕ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಬ್ಲಾಸ್ಟ್ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟ್ರಯಲ್ ಬ್ಲಾಸ್ಟ್ ಕಂಪನದಿಂದ ಈಗಲ್ಲದಿದ್ದರೂ ಮುಂದೆ ಕೆಆರ್‌ಎಸ್ ಜಲಾಶಯಕ್ಕೆ ಅಪಾಯ ಒದಗಬಹುದು. ಹೀಗಾಗಿ ಸರ್ಕಾರ ಜನರ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಇನ್ನು ಟ್ರಯಲ್ ಬ್ಲಾಸ್ಟ್ ನಡೆಸಬೇಕೆಂಬ ಸರ್ಕಾರದ ನಿರ್ಧಾರದ ಹಿಂದೆ ಅನುಮಾನವಿದೆ. ವ್ಯತಿರಿಕ್ತ ವರದಿ ಪಡೆದು ಗಣಿಗಾರಿಕೆಗೆ ಅವಕಾಶ ದೊರಕಿಸುವ ಹುನ್ನಾರ ಇದೆ ಎಂಬ ಶಂಕೆ ಕಾಡುತ್ತಿದೆ ಎಂದು ದೂರಿದರು.
ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲಾಗಿದೆ. ಇದಕ್ಕಾಗಿ ರಾಜ್ಯ ರೈತ ಸಂಘ ಸತತ ಹೋರಾಟ ನಡೆಸಿತ್ತು. ಈಗ ನ್ಯಾಯಾಲಯ ಅದೇಶಿಸಿದೆ ಎಂಬ ಕಾರಣ ನೀಡಿ ಟ್ರಯಲ್ ಬ್ಲಾಸ್ಟ್ ಮಾಡಲು ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ ಎಂದರು.
ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಚಳವಳಿ ಗಟ್ಟಿಗೊಳಿಸಲು ಜು.10ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ರಾಜ್ಯದಲ್ಲಿ ರೈತ ಸಂಘಟನೆ ಬಲಗೊಳಿಸಲು ಮನೆಗೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ಅಭಿಯಾನ ಆರಂಭಿಸಿ, ಮುಂದಿನ ಎರಡು ವರ್ಷದಲ್ಲಿ ಸುಮಾರು ಎರಡು ಕೋಟಿ ಸದಸ್ಯರನ್ನು ಹೊಂದುವ ಗುರಿ ಇದೆ ಎಂದರು.
ಮುಖಂಡರಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನಾಗನಹಳ್ಳಿ ವಿಜೇಂದ್ರ, ಪ್ರಸನ್ನ ಎನ್.ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net