ಜನವಸತಿ ಪ್ರದೇಶದಲ್ಲಿ ಕೋಳಿ ಅಂಗಡಿಗಳಿಗೆ ಅನುಮತಿ ನೀಡದಿರಿ

18blrp2
ಜನವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ತೆರವಿಗೆ ಅನುಮತಿ ನೀಡದಂತೆ ಒತ್ತಾಯಿಸಿ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್‌ಗೆ ಮನವಿ ಸಲ್ಲಿಸುತ್ತಿರುವ ಹೊಳೆ ಬೀದಿ ನಿವಾಸಿಗಳು.
Published on

ಬೇಲೂರು: ಜನ ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿಗಳು ತಲೆ ಎತ್ತುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಪುರಸಭೆ ವ್ಯಾಪ್ತಿಯ 6ನೇ ವಾರ್ಡಿನ ಹೊಳೆ ಬೀದಿಯ ನಿವಾಸಿಗಳು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

ಹೊಳೆ ಬೀದಿ ನಿವಾಸಿಗಳಾದ ಅನಿತಾ, ಭವ್ಯಾ, ಲಲಿತಾ, ವೀಣಾ ಮಾತನಾಡಿ, ಬಸ್ ನಿಲ್ದಾಣ ಮುಂಭಾಗದ ಅಂಬೇಡ್ಕರ್ ಭವನದ ಬಳಿ ಇದ್ದ ಕೋಳಿ ಅಂಗಡಿಗಳನ್ನು ಪುರಸಭೆಯಿಂದ ಕೆಲ ತಿಂಗಳ ಹಿಂದೆ ತೆರವುಗೊಳಿಸಿದ್ದರು. ಆದರೆ ಅಲ್ಲಿದ್ದ ಕೆಲ ಅಂಗಡಿಗಳವರು ಹೊಳೆ ಬೀದಿಯ ಜನವಸತಿ ಪ್ರದೇಶದಲ್ಲಿ ಮತ್ತೆ ಕೋಳಿ ಅಂಗಡಿಗಳನ್ನು ತೆರೆಯುತ್ತಿರುವುದರಿಂದ ಈ ಬೀದಿಯಲ್ಲಿ ವಾಸಿಸುವ ನಮಗೆ ಸಾಂಕ್ರಾಮಿಕ ರೋಗಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಜತೆಗೆ ನಾಯಿಗಳು ಮನೆ ಒಳಕ್ಕೆ ಭಯವಿಲ್ಲದೆ ನುಗ್ಗುತ್ತಿವೆ. ಈ ಸಂದರ್ಭ ಏನಾದರೂ ತೊಂದರೆಯಾದರೆ ಯಾರು ಹೊಣೆ? ಜತೆಗೆ ಈ ಭಾಗದಲ್ಲಿರುವ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವಾಗ ನಾಯಿಗಳು ಕಚ್ಚಿ ಗಾಯಗೊಳಿಸಿರುವ ಘಟನೆ ಸಹ ನಡೆದಿದೆ. ಹೊಳೆ ಬೀದಿಯಲ್ಲಿ ರಸ್ತೆ ಕಿರಿದಾಗಿರುವುದರಿಂದ ಇಲ್ಲಿನ ಅಂಗಡಿಗಳಿಗೆ ಬರುವವರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಾರ್ವಜನಿಕರು, ವಾಹನಗಳ ಓಡಾಟಕ್ಕೂ ಕಷ್ಟವಾಗುತ್ತಿದೆ. ಆದ್ದರಿಂದ ಹೊಳೆ ಬೀದಿಯಲ್ಲಿರುವ ಎಲ್ಲ ಕೋಳಿ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಸಾರ್ವಜನಿಕರ ಹಿತ ಕಾಯುವುದೇ ನಮ್ಮ ಕರ್ತವ್ಯ. ಅಂಬೇಡ್ಕರ್ ಭವನದ ಸಮೀಪವಿದ್ದ ಕೋಳಿ ಅಂಗಡಿಗಳನ್ನು ತೆರವು ಮಾಡಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಕೆಲವರು ತಾತ್ಕಾಲಿಕವಾಗಿ ಅವರ ಸ್ವಂತ ಸ್ಥಳದಲ್ಲಿ ಅಂಗಡಿ ತೆರೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ಪಟ್ಟಣದಲ್ಲಿರುವ ಎಲ್ಲ ಕೋಳಿ ಅಂಗಡಿಗಳನ್ನು ಒಂದೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಹೊಳೆ ಬೀದಿಯಲ್ಲಿ ಯಾವುದೇ ಕೋಳಿ ಅಂಗಡಿ ತೆರೆಯಲು ಪರವಾನಗಿ ನೀಡುವುದಿಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ಸುಜಯ್‌ಕುಮಾರ್, ಸದಸ್ಯ ಜಮಾಲ್, ಸ್ಥಳೀಯರಾದ ಸಂದ್ಯಾ, ರಂಗಮ್ಮ, ಮೀನಾಕ್ಷಿ, ರತ್ನಮ್ಮ, ದೀಪು, ಕೆಂಪದೇವಮ್ಮ, ಗುರುಬಸವೇಗೌಡ, ನಟರಾಜ್, ಮುಕ್ತಾರ್ ಅಹಮದ್, ಯೊಗೇಶ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net